ತೀರ್ಥಹಳ್ಳಿ: ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರ ಸರದ್ ವಾದನ ಕಾರ್ಯಕ್ರಮ ಗಾಯತ್ರಿ ಮಂದಿರದಲ್ಲಿ ನೆರವೇರಿತು. ಸರೋದ್ ಮಾಂತ್ರಿಕ ಎಂದೇ ಪ್ರಖ್ಯಾತರಾಗಿರುವ ಇವರ ಸರೋದ್ ವಾದನ ಸುಮಾರು 2 ಗಂಟೆಗೂ ಅಧಿಕ ಸಮಯ ನಡೆಯಿತು.
80 ವಸಂತಗಳನ್ನು ಪೂರೈಸುತ್ತಿರುವ ರಾಜೀವ್ ತಾರಾನಾಥರು ಕಳೆದ 40 ವರ್ಷಗಳ ಹಿಂದೆ ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮ ನೀಡಿದ್ದನ್ನು ಈ ಸಂದರ್ಭದಲ್ಲಿ ಮೆಲುಕು ಹಾಕಿದರು. ಕಡಿದಾಳು ಶಾಮಣ್ಣನವರ ನೇತೃತ್ವದಲ್ಲಿ ಸರೋದ್ ವಾದನ ಕಾರ್ಯಕ್ರಮವನ್ನು ಶಿವಮೊಗ್ಗದ ಹಿಂದೂಸ್ಥಾನಿ ಸಂಗೀತ ಸಭಾ ಹಾಗೂ ತೀರ್ಥಹಳ್ಳಿಯ ಸಂಗೀತ ಸಭಾ ಆಯೋಜಿಸಿದ್ದವು. ಖ್ಯಾತ ತಬಲಾ ಕಲಾವಿದ ಪಂ.ಉದಯ ರಾಜ್ ಕರ್ಪೂರ್ ತಬಲಾ ಸಾಥ್ ನೀಡಿದರು. ಸರೋದ್ ವಾದಕ ಪಂ.ರಾಜೀವ್ ತಾರಾನಾಥ್ರನ್ನು ಸನ್ಮಾನಿಸಲಾಯಿತು. ಶಾಸಕ ಕಿಮ್ಮನೆ ರತ್ನಾಕರ್, ಕುವೆಂಪು ಪ್ರತಿಷ್ಠಾನ ಕಲಾವಿದರ ಸನ್ಮಾನಕ್ಕೆ ನೆರವಾದರು.