ಶಿವಮೊಗ್ಗ: ಬೆಳಗಾಗುವುದಕ್ಕೆ ಮುಂಚೆಯೇ ಸಾಲುಗಟ್ಟಿದ ಜನರು, ದಿನಕ್ಕೆ 50 ಜನರಿಗೆ ಮಾತ್ರ ಅವಕಾಶ, ಸಿಕ್ಕವರಿಗೆ ಸೀರುಂಡೆ, ಯಾವಾಗ ಅರ್ಜಿ ವಿತರಣೆ ನಿಲ್ಲುತ್ತದೆಯೋ ಹೇಳಲು ಸಾಧ್ಯವಿಲ್ಲ. ಇವತ್ತು ಸಿಗದಿದ್ದರೆ ನಾಳೆ ಮತ್ತೆ ಬಂದು ನಿಲ್ಲಬೇಕು.
ಎಲ್ಲಾ ಸೌಲಭ್ಯಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಮಾಡಲು ಹೊರಟಿರುವ ಸರ್ಕಾರ ಎಲ್ಲರಿಗೂ ತ್ವರಿತವಾಗಿ ಆಧಾರ್ ಕಾರ್ಡ್ ನೀಡುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ. ಆಧಾರ್ ಕಾರ್ಡ್ ಪಡೆಯಲು ನಾಗರಿಕರು ಹರಸಾಹಸ ಪಡುವಂತಾಗಿದೆ.
10 ಕಡೆ ಕೇಂದ್ರ: ಕೇಂದ್ರ ಸರ್ಕಾರದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಆರಂಭಿಸಿರುವ ಆಧಾರ್ ವಿಶಿಷ್ಠ ಗುರುತಿನ ಸಂಖ್ಯೆ ಯೋಜನೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಲುಪಬೇಕಿದ್ದು, ಈ ಉದ್ದೇಶದಿಂದ ಜಿಲ್ಲಾಡಳಿತ ಮತ್ತು ನಗರಸಭೆಯಿಂದ ನೋಂದಣಿ ಪ್ರಕ್ರಿಯೆಗೆ ನಗರದ 36 ಕಡೆಗಳಲ್ಲಿ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿದೆ. ಈ ಕೇಂದ್ರಗಳ ಜವಾಬ್ದಾರಿಯನ್ನು ಖಾಸಗಿ ಕಂಪನಿಗೆ ವಹಿಸಿದ್ದು, ಇಲ್ಲಿನ ಸಂಯೋಜಕರು ಸಿಬ್ಬಂದಿ ಕೊರತೆ ನೆಪದಿಂದ ಕೇವಲ ನಗರದ 10 ಕಡೆ ಕೇಂದ್ರಗಳನ್ನು ತೆರೆದಿದ್ದಾರೆ.
ಪ್ರತಿ ನಿತ್ಯ ಸುಮಾರು 50ರಿಂದ 100 ಜನರಿಗೆ ಅರ್ಜಿ ವಿತರಿಸುತ್ತಿದೆ. ಕಳೆದ ಡಿ.12 ರಿಂದ ಪ್ರಾರಂಭವಾದ ಈ ಪ್ರಕ್ರಿಯೆಗೆ ಜ.28ರ ವರೆಗೆ 35 ಸಾವಿರ ಜನರಿಗೆ ಅರ್ಜಿ ನೀಡಲಾಗಿದೆ. ಪ್ರತಿ ಕೇಂದ್ರದಲ್ಲೂ ಕನಿಷ್ಠ 4-5 ಕಂಪ್ಯೂಟರ್ ಹಾಗೂ ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ.
ನೂಕುನುಗ್ಗಲು: ಈ ಕೇಂದ್ರಗಳಲ್ಲಿ ಪ್ರತಿನಿತ್ಯ ಆಧಾರ್ ಕಾರ್ಡ್ ಆಕಾಂಕ್ಷಿಗಳು ಅನುಭವಿಸುತ್ತಿರುವ ಕಷ್ಟಗಳು ಕಡಿಮೆಯೇನಲ್ಲ. ಎಲ್ಲಿ ನಮಗೆ ಕಾರ್ಡ್ ಸಿಗುವುದಿಲ್ಲವೂ ಎಂಬ ಆಂತಕದಿಂದ ಬೆಳಿಗ್ಗೆ 5 ಗಂಟೆಗೇ ಕೆಲಸ ಕಾರ್ಯಗಳನ್ನು ಬಿಟ್ಟು ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.
ಆದರೆ, ಅಧಿಕಾರಿಗಳು ನೀಡುವ ಕಾರಣಗಳೇ ಬೇರೆ, ಸಾರ್ವಜನಿಕರು ಗಂಟೆಗಟ್ಟಲೇ ಕಾಯುವ ಅವಶ್ಯಕತೆ ಇಲ್ಲ. ಇದಕ್ಕೆ ಯಾವುದೇ ಸಮಯ, ದಿನ ನಿಗದಿ ಮಾಡಿಲ್ಲ. ಪ್ರತಿನಿತ್ಯ ಆಧಾರ್ ಕಾರ್ಡ್ಗಾಗಿ ಅರ್ಜಿ ವಿತರಣೆ ಮಾಡಲಾಗುತ್ತದೆ. ಒಂದು ದಿನಕ್ಕೆ ಇಂತಿಷ್ಟೆ ಜನರಿಗೆ (50ರಿಂದ 100) ಅರ್ಜಿ ನೀಡಲಾಗುತ್ತದೆ. ಈ ಬಗ್ಗೆ ಸಾರ್ವಜನಿಕರಿಗೆ ಎಷ್ಟೇ ಮನವಿ ಮಾಡಿದರು ಬೆಳಗಿನ ಜಾವದಿಂದ ಕಾಯುತ್ತಾರೆ. ಆದ್ದರಿಂದ ನಿಗದಿತ ಸಮಯಕ್ಕಿಂತ ಒಂದು ಗಂಟೆ ಹೆಚ್ಚು ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ.
ಸಮಸ್ಯೆ ಏನು?: ಜಿಲ್ಲಾಡಳಿತ ಆಧಾರ್ ಕಾರ್ಡ್ ವಿತರಣೆಯನ್ನು ಸ್ಥಳೀಯ ನಗರಸಭೆಗೆ ವಹಿಸಿದೆ. ನಗರಸಭೆ ಚೆನ್ನೈ ಮೂಲಕ ಓರಿಜಿನ್ ಐಟಿಎಫ್ಎಸ್ ಎಂಬ ಖಾಸಗಿ ಸಂಸ್ಥೆಗೆ ವಹಿಸಿದೆ. ಈ ಕಂಪನಿ ಸಿಬ್ಬಂದಿ ಕೊರತೆಯಿಂದ ನಗರದ 10 ಕಡೆ ಆಧಾರ್ ಕಾರ್ಡ್ ವಿತರಣೆ ಕೇಂದ್ರಗಳನ್ನು ತೆರೆದಿದೆ. ಪ್ರತಿ ಕೇಂದ್ರದಲ್ಲೂ 5-6 ಸಿಬ್ಬಂದಿ ನೇಮಕ ಮಾಡಿಕೊಂಡು ಎಲ್ಲರಿಗೂ ಕಂಪ್ಯೂಟರ್ ಹಾಗೂ ಇತರೆ ಪರಿಕರಗಳನ್ನು ನೀಡಿದೆ.
ಆಧಾರ್ ಕಾರ್ಡ್ ವಿತರಣೆ ಮಾಡಲು ಅರ್ಹತೆ ಹೊಂದಿದ ಅಭ್ಯರ್ಥಿಗಳು ಬೇಕಾಗುತ್ತದೆ. ಅಂತರ್ಜಾಲದ ಎಸ್ಐಎಫ್ಐ ಪರೀಕ್ಷೆಯಲ್ಲಿ ಉತೀರ್ಣರಾದವರು ಮಾತ್ರ ಈ ಕೆಲಸ ನಿರ್ವಹಿಸಲು ಸಾಧ್ಯ. ಇನ್ನಷ್ಟು ಮಂದಿ ಆಯ್ಕೆ ಆಗಬೇಕಾಗಿದೆ. ನಂತರ ಉಳಿದೆಡೆಯೂ ಕೇಂದ್ರ ತೆರೆಯಲಾಗುವುದು. ಉತೀರ್ಣರಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಮುಂದಿನ ತಿಂಗಳಲ್ಲಿ ನಗರಸಭೆ ನಿಗದಿ ಮಾಡಿದ ಸ್ಥಳಗಳಲ್ಲಿ ಮತ್ತೂ 10 ಕೇಂದ್ರಗಳನ್ನು ತೆರೆಯಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಸದ್ಯ ಎಲ್ಲೆಲ್ಲಿ: ಉಪ ವಿಭಾಗಾಧಿಕಾರಿ ಕಚೇರಿ, ಗೋಪಾಲಗೌಡ ಬಡಾವಣೆ, ವಿಜಯ ನಗರದ ಶಿವಮೊಗ್ಗ ಒನ್ ಕೇಂದ್ರ, ಅಶೋಕ ನಗರದ ಸಮುದಾಯ ಭವನ, ಜಯನಗರ ಸರ್ವೋದಯ ಶಾಲೆ, ಗಾಂಧಿ ಬಜಾರ್ನ ಭರ್ಮಪ್ಪ ನಗರ, ವಿನೋಬ ನಗರದ ಸೂಡಾ ಕಚೇರಿ ಹಾಗೂ ಶರಾವತಿ ನಗರದ ಸಮುದಾಯ ಭವನ, ಬಸವಕೇಂದ್ರ, ಗಾಡಿಕೊಪ್ಪ, ಪಿಅಂಡ್ಟಿ ಕಾಲೋನಿ, ಗೋಪಾಲ ಅಂಗನವಾಡಿ ಕೇಂದ್ರ, ಸೀಗೆಹಟ್ಟಿ, ಸಾಗರ ರಸ್ತೆಯ ಡಿಎಆರ್ನಲ್ಲಿ ಆಧಾರ್ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಅರ್ಜಿ ಸ್ವೀಕಾರ ಪ್ರಗತಿಯಲ್ಲಿದೆ. ಸಂಘ, ಸಂಸ್ಥೆಗಳು ನಗರಸಭೆಗೆ ಮನವಿ ಮಾಡಿಕೊಂಡರೇ ಅಂತಹ ಸಂಸ್ಥೆಗಳಲ್ಲಿ ಒಂದು ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.