ಕ.ಪ್ರ.ವಾರ್ತೆ ಟಿ ಸೊರಬ ಟಿ ಡಿ.12
ಸರ್ಕಾರಿ ಜಾಗದ ದುರ್ಬಳಕೆ, ಉಳವಿ ಗ್ರಾಪಂ ಬಿಲ್ ಕಲೆಕ್ಟರ್ ವಿರುದ್ಧ, ಜಮೀನು ಸಂಬಂಧ ಅರ್ಜಿಯಲ್ಲಿನ ವಿಳಂಬದ ಕುರಿತು ದೂರು, ಲೋಕಾಯುಕ್ತ ಮುಟ್ಟಗೋಲು ಹಾಕಿಕೊಂಡ ಕೋಟ್ಯಂತರ ಹಣ ಏನಾಯಿತು? ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಕೈ ಬಿಸಿ ಮಾಡದೆ ಕೆಲಸವಾಗುವುದಿಲ್ಲ. ಖಾತೆ ಬದಲಾವಣೆಗೆ ಅರ್ಜಿ ನೀಡಿ 6 ವರ್ಷವಾದರೂ ಬದಲಾವಣೆ ಆಗಿಲ್ಲ. ಲೋಕಾಯುಕ್ತರಿಗೆ ಕೆಳಮಟ್ಟದ ಅಧಿಕಾರಿಗಳು ಮಾತ್ರ ಸಿಲುಕಿ ಶಿಕ್ಷೆಗೊಳಗಾಗುತ್ತಾರೆ. ಮೇಲ್ಮಟ್ಟದ ಅಧಿಕಾರಿಗಳು ನುಣುಚಿಕೊಳ್ಳುತ್ತಾರೆ ಏಕೆ...?
ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಜನರಿಂದ ತೂರಿಬಂದ ಗಂಭೀರ ಪ್ರಶ್ನೆಗಳಿವು.
ತಾಲೂಕಿನ ಉಳವಿಯಲ್ಲಿ ಗುರುವಾರ ಮಧ್ಯಾಹ್ನ ನಡೆದ ಲೋಕಾಯುಕ್ತರಿಂದ ದೂರು ಪರಿಶೀಲನೆ, ಅಹವಾಲು ಸ್ವೀಕಾರ ಸಭೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ದೂರುಗಳ ಅರ್ಜಿಗಳು ಅಧಿಕಾರಿಗಳ ಕೈ ಸೇರಿದವು. ಇದು ಸರ್ಕಾರಿ ಕಾರ್ಯಕ್ರಮದ ಬಗ್ಗೆ ಅಗತ್ಯ ಪ್ರಚಾರ ಮತ್ತು ಜಾಗೃತಿ ಕಾರ್ಯಕ್ರಮದ ಕೊರೆತೆಗೆ ಸಾಕ್ಷಿಯಂತಿತ್ತು.
ಲೋಕಾಯುಕ್ತ ಸಭೆ ಬಗ್ಗೆ ಸ್ಥಳೀಯರಿಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ. ಇದು ಕೇವಲ ಅಧಿಕಾರಿಗಳಮಟ್ಟದ ಸಭೆ ಆಯಿತು. ಲೋಕಾಯುಕ್ತರ ಭೇಟಿ ಸಾರ್ವಜನಿಕವಾಗಿ ಕರೆಯುವುದಕ್ಕಿಂತ ತಾಲೂಕು ಪ್ರವಾಸಿ ಮಂದಿರದಲ್ಲಿ ಕರೆದರೆ ಹೆಚ್ಚು ದೂರುಗಳನ್ನು ನೀಡಲು ನೆರವಾಗುತ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರಿಂದ ಕೇಳಿಬಂತು.
ಲಿಖಿತ ದೂರಿಗೆ ಬೆಲೆ: ಸರ್ಕಾರದ ಯೋಜನೆಗಳು, ಅವುಗಳ ಕಾರ್ಯ, ಜನರಿಗೆ ಅವುಗಳ ಪ್ರಯೋಜನ ಎಷ್ಟರಮಟ್ಟಿಗೆ ಆಗುತ್ತಿದೆ ಎಂಬುದರ ಬಗ್ಗೆ ಅವಲೋಕನ ಮಾಡುವ ಕ್ರಮ ಲೋಕಾಯುಕ್ತ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಜಿಲ್ಲಾ ಲೋಕಾಯುಕ್ತ ಆರಕ್ಷಕ ಕೆ.ಸಿ.ಪುರುಷೋತ್ತಮ ತಿಳಿಸಿದರು.
ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ಪರಿಕಲ್ಪನೆ, ವ್ಯಾಪ್ತಿ ಕುರಿತಂತೆ ವಿವರ ನೀಡಿದ ಅವರು ಸಮಯ, ಔಚಿತ್ಯತೆ, ಅಗತ್ಯತೆ ಕುರಿತಂತೆ ತಿಳಿಸಿದರು. ಲಿಖಿತ ದೂರುಗಳನ್ನು ಮಾತ್ರ ಇಲ್ಲಿ ಪರಿಗಣಿಸಲಾಗುತ್ತದೆಯೇ ವಿನಹ ಅನಾವಶ್ಯಕ ವೈಯಕ್ತಿಕ ನಿಂದನೆ ಇತ್ಯಾದಿಗೆ ಅವಕಾಶವಿಲ್ಲ ಎಂದರು.
ಲೋಕಾಯುಕ್ತಕ್ಕೆ ಗ್ರಾಪಂ ಆಡಳಿತದ ಪಿಡಿಒ, ಕಾರ್ಯದರ್ಶಿ ಹಾಗೂ ಅಧ್ಯಕ್ಷರ ಕುರಿತು ಹೆಚ್ಚು ದೂರುಗಳು ಬರುತ್ತಿರುವುದರಿಂದ ಎಚ್ಚರದಿಂದ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ವಂಚನೆ ಆಗದಂತೆ ನಿಗಾ ವಹಿಸಬೇಕೆಂದು ಹಾಜರಿದ್ದ ಸ್ಥಳೀಯ ಪಿಡಿಒ, ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಯಿತು.
ತಾಪಂ ಸಹಾಯಕ ನಿರ್ದೇಶಕ ವೆಂಕಟೇಶ್, ಉಳವಿ ಉಪ ತಹಸೀಲ್ದಾರ್ ಅಂಬಾಜಿರಾವ್, ಗ್ರಾಪಂ ಅಧ್ಯಕ್ಷ ಕೆ.ಪರಶುರಾಮ್, ಉಪಾಧ್ಯಕ್ಷೆ ಪ್ರೇಮಾ, ತಾಪಂ ಸದಸ್ಯ ಬರಗಿ ನಿಂಗಪ್ಪ, ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.
Advertisement