ವರುಣನ ಆರ್ಭಟ: ಸಂಚಾರ ಅಸ್ತವ್ಯಸ್ತ

Updated on: 

ಕನ್ನಡಪ್ರಭ ವಾರ್ತೆ, ತೀಥಹಳ್ಳಿ, ಆ.1
ವರುಣನ ಆರ್ಭಟದಿಂದ ತೀರ್ಥಹಳ್ಳಿ ತಾಲೂಕಿನ ತುಂಗಾ ನದಿ ಉಕ್ಕಿ ಹರಿಯುತ್ತಿದೆ. ಪ್ರವಾಹದ ಮಟ್ಟವಾದ 85 ಅಡಿಗಳಿಗೂ ಮಿಕ್ಕಿದೆ.
ತಂಗಾ ನದಿ ಮಧ್ಯದಲ್ಲಿರುವ ಪವಿತ್ರ ರಾಮಮಂಟಪ ಮುಳುಗಿದೆ. ತೀರ್ಥಹಳ್ಳಿ ಆಗುಂಬೆ ಮಧ್ಯದ ಶಿವರಾಜಪುರ, ಕಲ್ಮನೆ, ಲಕ್ಕುಂದಗಳಲ್ಲಿ ರಸ್ತೆಯ ಮೇಲೆ ನೀರು ನುಗ್ಗಿದ್ದು, ಮಂಡಗದ್ದೆಯಲ್ಲಿ ರಸ್ತೆಗೆ ನೀರು ನುಗ್ಗಿ ಸಂಚಾರ ಅಸ್ತವ್ಯಸ್ತವಾಗಿದೆ. ಕಂದಾದ್ರಿ ಸಮೀಪದ ನಾಬಲದಲ್ಲಿ ಸೇತುವೆಯ ಮೇಲೆ ನೀರು ನುಗ್ಗಿ  ಅವಾಂತರ ಸೃಷ್ಟಿಯಾಗಿದೆ.
ಹಾಲು ಮಹಿಷಿಯಲ್ಲಿ ಕೆರೆ ದಂಡೆ ಒಡೆದು ರೈತರೊಬ್ಬರ ಕೃಷಿ ಜಮೀನಿಗೆ ನೀರು ನುಗ್ಗಿ 8 ಎಕರೆಯಲ್ಲಿ ಫಸಲಿಗೆ ತೊಂದರೆಯಾಗಿದೆ. ಕಲ್ಮನೆ, ಲಕ್ಕುಂದಗಳಲ್ಲೂ ತೋಟಕ್ಕೆ ನೀರು ನುಗ್ಗಿದೆ. ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಬರುವ ವಾಹನಗಳ ದಿಕ್ಕು ಬದಲಿಸಲಾಗಿದ್ದು, ಹಣಗೆರೆಕಟ್ಟೆ ಬಳಸಿ ಬರಬೇಕಾಗಿದೆ.
ಪಟ್ಟಣದ ಆಸ್ತಿಕರು ತುಂಗೆಯ ಮಡಿಲಿಗೆ ಬಾಗಿನ ಅರ್ಪಿಸಿ, ಪುನೀತರಾದರು.
ತಹಸೀಲ್ದಾರ್ ಮಂಡಗದ್ದೆಯಲ್ಲಿ ನೀರು ರಸ್ತೆಗೆ ನುಗ್ಗಿದ್ದನ್ನು ವೀಕ್ಷಿಸಿ, ಅಗತ್ಯ ರಕ್ಷಣಾ ಕ್ರಮ ತೆಗೆದುಕೊಂಡರು. ಪೊಲೀಸ್ ಇಲಾಖೆ ಕೂಡ ಧ್ವನಿವರ್ಧಕ ಮೂಲಕ ಜನರಿಗೆ ಪ್ರವಾಹ ಪರಿಸ್ಥಿತಿಯ ಎಚ್ಚರಿಕೆ ನೀಡಿ, ಜಾಗರೂಕತೆಯಿಂದ ಇರಲು ತಿಳಿಸಿದರು.
ದಾಖಲೆ ಮಳೆ: ಆಗುಂಬೆಯಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದಿದೆ. ಆಗುಂಬೆಯಲ್ಲಿ 395.8 ಮಿಮೀ ಹಾಗೂ ತೀರ್ಥಹಳ್ಳಿಯಲ್ಲಿ 185.2 ಮಿಮೀ ಮಳೆ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com