ಸಾಗರ: ಬಾಯಿ ಇಲ್ಲದವರ ಸಮುದಾಯಕ್ಕೆ ಧ್ವನಿಯಾಗಿ, ಅವರಿಗೆ ಭೂ ಒಡೆತನ ಕಲ್ಪಿಸಿ ಕೊಡುವಲ್ಲಿ ಗಣಪತಿಯಪ್ಪನವರ ಹೋರಾಟ ಸ್ಮರಣಾರ್ಹ ಎಂದು ಸಾಹಿತಿ ಡಾ.ನಾ.ಡಿಸೋಜ ಹೇಳಿದರು.
ಕಾಗೋಡು ಸತ್ಯಾಗ್ರಹದ ರುವಾರಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಗಣಪತಿಯಪ್ಪ ಅವರಿಗೆ 90 ವರ್ಷ ತುಂಬಿದ ಹಿನ್ನೆಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವಡ್ನಾಲ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ದೀವರ ಸಮಾಜ ನಾಚಿಕೆ, ಮುಜುಗರದಿಂದ ಬದುಕುತ್ತಿತ್ತು. ಪೇಟೆ, ಪಟ್ಟಣಕ್ಕೆ ಬರಲು ಅವರ ಉಡುಗೆ ತೊಡುಗೆ, ಮಾತು ತೊಡಕುಂಟು ಮಾಡುತ್ತಿತ್ತು. ಇಂತಹ ಸಂದರ್ಭದಲ್ಲಿ ಕಾಗೋಡು ಸತ್ಯಾಗ್ರಹದ ಮೂಲಕ ಹೋರಾಟದ ಕಣಕ್ಕೆ ಧುಮುಕಿದ ಗಣಪತಿಯಪ್ಪ ಸಮುದಾಯ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಪ್ರೇರಣೆಯಾಗಿ ನಿಂತರು. ಪ್ರಸ್ತುತ ದೀವರ ಸಮಾಜ ಪ್ರಬಲ ಜನಾಂಗಗಳ ಜೊತೆ ಸ್ಪರ್ಧೆಗೆ ನಿಂತಿದ್ದರೆ ಅದಕ್ಕೆ ಗಣಪತಿಯಪ್ಪನವರೇ ಕಾರಣ ಎಂದರು.
ಗಣಪತಿಯಪ್ಪನವರ ಚಿಂತನೆ ಇಂದಿಗೂ ಪ್ರಸ್ತುತವಾಗಿದ್ದು, ಶೋಷಣೆಮುಕ್ತ ಸಮಾಜ ಅವರ ಕನಸು ನನಸಾಗಿಸುವ ನಿಟ್ಟಿನಲ್ಲಿ ಯುವಜನರು ಮುಂದಾಗಬೇಕು ಎಂದು ಹೇಳಿದರು.
ಲೇಖಕ ವಿಲಿಯಂ ಮಾತನಾಡಿ, ಹಿಂದಿನ ಹೋರಾಟದ ದಿನಗಳು ಮತ್ತೆ ಕಾಣಲು ಸಾಧ್ಯವಾಗದ ಸ್ಥಿತಿ ಇದೆ. ಗಣಪತಿಯಪ್ಪ, ಎಚ್.ಎಸ್.ದೊರೆಸ್ವಾಮಿಯವರಂತಹ ಬೆರಳೆಣಿಕೆಯ ಹೋರಾಟಗಾರರನ್ನು ಯುವ ಸಮುದಾಯ ಸ್ಫೂರ್ತಿಯಾಗಿರಿಸಿ ಕೊಳ್ಳಬೇಕು. ಸ್ವಾರ್ಥರಹಿತ ಹೋರಾಟದಿಂದ ಮಾತ್ರ ಜನಮಾನಸದಲ್ಲಿ ಪ್ರತಿಷ್ಠಾಪನೆಯಾಗಲು ಸಾಧ್ಯ. ಹಿಂದೆ ಹೋರಾಟವೆಂದರೆ ಮಹಾಕಾವ್ಯದಂತೆ ಸುದೀರ್ಘವಾಗಿರುತ್ತಿತ್ತು. ಈಗ ಚುಟುಕು ಕವನದಂತೆ ಹೋರಾಟಗಳು ಮಿತಿಗೊಳ್ಳುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.
ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮಂಜಪ್ಪ ಗಣಪತಿಯಪ್ಪ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಬಸವರಾಜ್ ಇದ್ದರು. ಯೋಗೀಶ್ ಗಣಪತಿಯಪ್ಪನವರ ಕುರಿತು ರಚಿಸಿದ ಕವನ ವಾಚಿಸಿದರು. ಜಿ.ನಾಗೇಶ್ ಸ್ವಾಗತಿಸಿದರು. ಎಸ್.ಆರ್.ಭಟ್ ವಂದಿಸಿದರು. ಉಮೇಶ್ ಹಿರೇನೆಲ್ಲೂರು ನಿರೂಪಿಸಿದರು.