ಚಿಕ್ಕಮಗಳೂರು: ಅತಿವೃಷ್ಟಿಯಿಂದ ಕಾಫಿ ಬೆಳೆಗೆ ಶೇ. 40 ರಷ್ಟು ಹಾನಿ ಸಂಭವಿಸಿದ್ದು, ಕಾಫಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ(ಕೆಜಿಎಫ್)ದ ಅಧ್ಯಕ್ಷ ಬಿ.ಎಸ್. ಜೈರಾಂ ಹೇಳಿದ್ದಾರೆ.
ಇತ್ತೀಚೆಗೆ ಕಾಫಿ ಬೆಳೆಗಾರರ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಅವರಿಗೆ ಮನವಿ ಸಲ್ಲಿಸಿತು ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು. ಅತಿವೃಷ್ಟಿಯಿಂದ ಹಾಗೂ ಕಾಂಡಕೊರಕದಿಂದ ಶೇ. 45ರಷ್ಟು ಕಾಫಿ ಗಿಡಗಳು ನಾಶವಾಗಿವೆ. ಕಾಂಡಕೊರಕದಿಂದ ಉಂಟಾಗುವ ನಷ್ಟಕ್ಕೆ ವಿಶೇಷ ಪ್ಯಾಕೇಜ್ ಜಾರಿಗೊಳಿಸಬೇಕು. ಸುಮಾರು ಎರಡೂವರೆ ವರ್ಷದಿಂದ 12ನೇ ಪಂಚವಾರ್ಷಿಕ ಯೋಜನೆಯು(950 ಕೋಟಿ) ಅನುಷ್ಠಾನಗೊಂಡಿಲ್ಲ. ಶೀಘ್ರದಲ್ಲೇ ಯೋಜನೆ ಅನುಷ್ಠಾನಗೊಳಿಸಬೇಕು. ಕಾಫಿ ಬೆಳೆ ಸಾಲದ ಮೇಲಿನ ಬಡ್ಡಿ ದರವು ಪ್ರಸ್ತುತ ಶೇ. 11.5 ರಷ್ಟಿದ್ದು, ಇದನ್ನು ಶೇ. 3ಕ್ಕೆ ಇಳಿಸಬೇಕು ಎಂದು ಆಗ್ರಹಿಸಲಾಯಿತು ಎಂದರು. ಇದೇ ಸಂದರ್ಭದಲ್ಲಿ ಕೇಂದ್ರ ವಾಣಿಜ್ಯ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ರೈಲ್ವೆ ಸಚಿವರಾದ ಸದಾನಂದಗೌಡ, ಕೇಂದ್ರ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳ ಸಚಿವರಾದ ಎಚ್.ಎನ್. ಅನಂತಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
Advertisement