ಶಿವಮೊಗ್ಗ: ಅವ್ಯವಹಾರ ನಡೆದಿರುವುದು ಡಿಸಿಸಿ ಬ್ಯಾಂಕಿನ ನಗರ ಶಾಖೆಯಲ್ಲಿ ಮಾತ್ರ. ಉಳಿದ 27 ಶಾಖೆಗಳ ಬಂಗಾರ ಅಡಮಾನ ಸಾಲ ಖಾತೆ ಪರಿಶೀಲಿಸಿದ್ದು, ಯಾವುದೇ ಲೋಪ ಕಂಡುಬಂದಿಲ್ಲ. ಗ್ರಾಹಕರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ತಳ್ಳಿಕಟ್ಟೆ ಮಂಜುನಾಥ್ ಹಾಗೂ ನಿರ್ದೇಶಕ ಎಸ್.ಪಿ. ದಿನೇಶ್ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ರೈತರಿಗೆ ಬಡ್ಡಿ ರಹಿತ ಅಥವಾ ಶೇಕಡಾ 3ರ ಬಡ್ಡಿ ಸಾಲ ಕೊಡುವುದು ಸಹಕಾರ ಸಂಸ್ಥೆಗಳು ಮಾತ್ರ. ಬೇರೆ ಯಾವ ಬ್ಯಾಂಕ್ ಸಹ ಇಷ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವುದಿಲ್ಲ. ಇಂತಹ ವ್ಯವಸ್ಥೆ ಹಾಳು ಮಾಡುವುದು ಸರಿ ಅಲ್ಲ. ಗ್ರಾಹಕರಿಗೆ ಯಾವ ರೀತಿಯ ತೊಂದರೆಯೂ ಆಗದು. ಠೇವಣಿ ಅವಧಿ ಪೂರ್ಣವಾದ ನಂತರ ಬಡ್ಡಿ ಸಹಿತ ಹಿಂತಿರುಗಿಸುತ್ತೇವೆ. ಈಗಲೇ ಹಿಂಪಡೆಯಬೇಡಿ ಎಂದು ತಿಳಿಸಿದರು.
ನಗರ ಶಾಖೆಯಲ್ಲಿ ಅವ್ಯವಹಾರದಿಂದ ಆಗಿರುವ ನಷ್ಟವನ್ನು ಸರಿದೂಗಿಸಲು ಹಲವು ಮಾರ್ಗಗಳನ್ನು ಕಂಡುಕೊಳ್ಳಲಾಗಿದೆ. ನಕಲಿ ಬಂಗಾರ ಎಂದರೆ ಬಂಗಾರದ ಪ್ರಮಾಣ ಕಡಿಮೆ ಎಂದಷ್ಟೇ ಅರ್ಥ. ಈ ಮೊತ್ತವೇ ರು. 10-12 ಕೋಟಿ ಆಗುತ್ತದೆ. ಆರೋಪಿಗಳ ನೋಂದಣಿ ಮೌಲ್ಯ ರು. 40 ಕೋಟಿ. ಮಾರುಕಟ್ಟೆ ಮೌಲ್ಯ ದುಪ್ಪಟ್ಟು ಆಗುತ್ತದೆ. ಈ ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಬ್ಯಾಂಕಿಗೆ ನಷ್ಟವಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ನಗರ ಶಾಖೆಯ ಎಲ್ಲಾ ಬಂಗಾರ ಅಡಮಾನ ಸಾಲ ಖಾತೆ ಪರಿಶೀಲಿಸಲಾಗಿದೆ. ಮ್ಯಾನೇಜರ್ ಶೋಭಾ ಸೃಷ್ಟಿಸಿದ್ದ 785 ಖಾತೆ ಜತೆಗೆ ಇನ್ನೂ ಮೂರು ಖಾತೆಗಳಲ್ಲಿ ಲೋಪ ಕಂಡುಬಂದಿದೆ. ಇವರೆಲ್ಲರನ್ನೂ ಬಂಧಿಸಲಾಗಿದೆ. ಉಳಿದ ಯಾವ ಖಾತೆಯಲ್ಲೂ ಲೋಪ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಸಕ್ಕರೆ ಕಾರ್ಖಾನೆ ಮುಚ್ಚಿದ್ದು, ಮತ್ತೆ ಪ್ರಾರಂಭಿಸಲು ಆಗಿಲ್ಲ. ಅದೇ ರೀತಿ ಡಿಸಿಸಿ ಬ್ಯಾಂಕ್ ನಷ್ಟ ಅನುಭವಿಸಿದರೆ ಜಿಲ್ಲೆಯ 1 ಲಕ್ಷಕ್ಕೂ ಅಧಿಕ ರೈತರು ಸಂಕಷ್ಟ ಎದುರಿಸ ಬೇಕಾಗುತ್ತದೆ. ಬ್ಯಾಂಕಿನ ನೌಕರರು, ಪಿಗ್ಮಿ ಸಂಗ್ರಹಕಾರರು ಅತಂತ್ರರಾಗುತ್ತಾರೆ ಎಂದರು.
ಠೇವಣಿ ನಷ್ಟ: ನಗರ ಶಾಖೆ ಅವ್ಯವಹಾರದ ಬಗ್ಗೆ ಪೊಲೀಸ್ ದೂರು ದಾಖಲಾದ ನಂತರ ಇದುವರೆಗೆ ರು. 60 ಕೋಟಿಯಷ್ಟು ಠೇವಣಿಯನ್ನು ಗ್ರಾಹಕರು ಹಿಂದಕ್ಕೆ ಪಡೆದಿದ್ದಾರೆ. ಇದೇ ವೇಳೆ ರು. 35 ಕೋಟಿಯಷ್ಟು ಠೇವಣಿ ಪಾವತಿಯೂ ಆಗಿದೆ ಎಂದು ಎಸ್.ಪಿ. ದಿನೇಶ್ ತಿಳಿಸಿದರು.
ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಸಹಕಾರ ಸಂಸ್ಥೆಗಳನ್ನು ಭೇಟಿ ಮಾಡಿ ಠೇವಣಿ ಹಿಂಪಡೆಯದಂತೆ ಮನವೊಲಿಸುತ್ತಿದ್ದೇವೆ. ಯಶಸ್ವಿಯೂ ಆಗಿದ್ದೇವೆ ಎಂದರು. ಸಹಕಾರ ಸಂಘಗಳಿಗೆ ಡಿಸಿಸಿ ಬ್ಯಾಂಕ್ ನೀಡಿರುವ ಸಾಲದ ಹಣವನ್ನು ವಾಪಸು ನೀಡುವಂತೆ ನಾವು ಯಾರನ್ನೂ ಕೇಳಿಲ್ಲ ಎಂದೂ ಅವರು ಹೇಳಿದರು.
Advertisement