ಶಿವಮೊಗ್ಗ: ಮಹಾರಾಷ್ಟ್ರ ಏಕೀಕರಣ ಸಮಿತಿ ಉಪಟಳ ರಾಜ್ಯದಲ್ಲಿ ಹೆಚ್ಚಿದ್ದು, ಬೆಳಗಾವಿ ವಿಷಯದಲ್ಲಿ ಪದೇ ಪದೇ ಖ್ಯಾತೆ ತೆಗೆದು ಕನ್ನಡಿಗರ ತಾಳ್ಮೆ ಪರೀಕ್ಷಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ನಗರದ ಹಿಂದೂ ಶಿವಾಜಿ ಯುವ ಸೇನೆ ಕಾರ್ಯಕರ್ತರು ಗೋಪಿವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಕೇಂದ್ರ ಸರ್ಕಾರ ಈಗಾಗಲೇ ತಿಳಿಸಿದೆ. ಇದನ್ನು ಒಪ್ಪಿಕೊಳ್ಳದ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರು ಇಲ್ಲ ಸಲ್ಲದ ನೆಪವೊಡ್ಡಿ ಪುಂಡಾಟ ನಡೆಸುತ್ತಿದ್ದಾರೆ. ಬೆಳಗಾವಿ ಗ್ರಾಮಾಂತರ ಪ್ರದೇಶಕ್ಕೆ ನುಗ್ಗಿ ಅಲ್ಲಿನ ಕನ್ನಡ ನಾಮಫಲಕಗಳನ್ನು ಕಿತ್ತೊಗೆದು ಮರಾಠಿ ಭಾಷೆಯಲ್ಲಿ ನಾಮಫಲಕ ಸ್ಥಾಪಿಸುತ್ತಿದ್ದಾರೆ. ಇಂತಹ ಕೃತ್ಯವನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷ ಥಾನಾಜಿ ಬೋಸಲೆ, ಕೇಶವರಾವ್‌ಕಾಳೆ, ಮಂಜೋಜಿರಾವ್ ಗಾಯಕ್‌ವಾಡ್ ಇತರರು ಇದ್ದರು.
ಜಯ ಕರ್ನಾಟಕ ಪ್ರತಿಭಟನೆ: ಎಂಇಎಸ್ ಕಿಡಿಕೇಡಿಗಳು ಕನ್ನಡಾಂಬೆಯ ಪ್ರತಿಕೃತಿಯ ಶವಯಾತ್ರೆ ನಡೆಸಿದ್ದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಬಸ್ ನಿಲ್ದಾಣದಿಂದ ಗೋಪಿ ವೃತ್ತದ ವರೆಗೆ ಎಂಇಎಸ್ ಶಾಸಕ ಸಾಂಬಾಜಿರಾವ್ ಪಾಟೀಲ್ ಅವರ ಅಣಕ ಶವವನ್ನು ಹೊತ್ತ ಕಾರ್ಯಕರ್ತರು ನಂತರ ಅದನ್ನು ದಹಿಸಿದರು.
ಕರ್ನಾಟಕದ ಸಕಲ ಸೌಲಭ್ಯ ಬಳಸಿಕೊಳ್ಳುತ್ತಿರುವ ಎಂಇಎಸ್ ಸದಸ್ಯರು ಕನ್ನಡಾಂಬೆಗೆ ದ್ರೋಹ ಬಗೆಯುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಕೂಡಲೇ ಸರ್ಕಾರ ಇಂತಹವರ ವಿರುದ್ಧ ಕ್ರಮಕೈಗೊಳ್ಳ ಬೇಕೆಂದು ಆಗ್ರಹಿಸಿದರು. ಸುರೇಶ್‌ಶೆಟ್ಟಿ ದೀಪಕ್, ಪರಶುರಾಮ್, ವೆಂಕಟೇಶ್, ಅನಿಲ್, ಸುನೀಲ್‌ಕುಮಾರ್, ಶ್ವೇತಾ ಇದ್ದರು.
Advertisement