ಹೊಸನಗರ: ಜಮೀನಿನಲ್ಲಿ ಉಳುಮೆ ಮಾಡುವಾಗಲೇ ಬಿದ್ದು ರೈತನೊಬ್ಬ ಸಾವನಪ್ಪಿದ ಘಟನೆ ತಾಲೂಕಿನ ನಗರ ಸಮೀಪ ಶ್ರೀಧರಪುರದಲ್ಲಿ ನಡೆದಿದೆ. ಮಾಜಿ ಗ್ರಾಪಂ ಸದಸ್ಯೆ ಗುಲಾಬಿಯವರ ಸಹೋದರ ರಾಜುಶೆಟ್ಟಿ(42) ಸಾವನಪ್ಪಿದ ರೈತ.
ಬುಧವಾರ ಮಧ್ಯಾಹ್ನ ಊಟ ಮಾಡಿ ಉಳುಮೆ ಮಾಡುತ್ತಿದ್ದ ವೇಳೆ ಅಲ್ಲೆ ಕುಸಿದು ಬಿದ್ದಿದ್ದಾನೆ. ಪಕ್ಕದ ಜಮೀನಿನಲ್ಲಿದ್ದ ಕೆಲವರು ಬಂದು ಎತ್ತುವ ವೇಳೆಗೆ ಪ್ರಾಣ ಹೋಗಿದೆ. ವಿಪರೀತ ಮಳೆ ಸುರಿಯುತ್ತಿದ್ದ ಹಿನ್ನಲೆಯಲ್ಲಿ ಈ ಘಟನೆ ಸಂಭವಿಸಿದ್ದು ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಪಂ ಮಾಜಿ ಉಪಾಧ್ಯಕ್ಷ ಕರುಣಾಕರಶೆಟ್ಟಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಾವು ಕಚ್ಚಿ 2 ಎತ್ತುಗಳ ಸಾವು
ಸೊರಬ: ಹಾವು ಕಚ್ಚಿ ಜಾನುವಾರುಗಳು ಮೃತಪಟ್ಟ ಘಟನೆ ತಾಲೂಕಿನ ಉದ್ರಿ ಗ್ರಾಪಂ ವ್ಯಾಪ್ತಿಯ ಗುಡ್ಡೆಕೊಪ್ಪ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಹುಚ್ಚರಾಯಪ್ಪ ರಾಮಪ್ಪ ಎಂಬುವರರಿಗೆ ಸೇರಿದ 2 ಎತ್ತುಗಳು ಈ ದುರ್ಘಟನೆಯಿಂದ ಮೃತಪಟ್ಟಿವೆ. ಸುಮಾರು 80 ಸಾವಿರ ನಷ್ಟವಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಉಪತಹಶೀಲ್ದಾರ್, ಗ್ರಾಮಲೆಕ್ಕಿಗ ಚಂದ್ರಕಾಂತ್, ಪಶುವೈಧ್ಯಾಧಿಕಾರಿ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಎಚ್. ಹನುಮಂತಪ್ಪ ಸ್ಥಳ ಪರಿಶೀಲನೆ ನಡೆಸಿದರು.
ಸೊಸೈಟಿಕೇರಿಯಲ್ಲಿ 2 ಮನೆ ಕುಸಿತ
ಶಿಕಾರಿಪುರ: ಕಳೆದ ಕೆಲ ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಪಟ್ಟಣದ ಸೊಸೈಟಿಕೇರಿಯಲ್ಲಿನ ಎರಡು ಮನೆಗಳು ಕುಸಿದು ಭಾಗಶಃ ಹಾನಿಯಾಗಿದೆ.
ಪುರಸಭಾ ಸದಸ್ಯ ಮಹೇಶ್ ಹುಲ್ಮಾರ್ ಪರಿಹಾರ ದೊರಕಿಸುವ ಭರವಸೆ ನೀಡಿದರು. ಸೊಸೈಟಿಕೇರಿಯಲ್ಲಿನ 220 ಮನೆಗಳಲ್ಲಿ ಹಲವು ಮನೆಗಳಿಗೆ ಹಕ್ಕುಪತ್ರಗಳನ್ನು ಇಂದಿಗೂ ವಿತರಿಸದೆ ಶಾಸಕರಾಗಿದ್ದ ಯಡಿಯೂರಪ್ಪನವರು ನಿರ್ಲಕ್ಷಿಸಿದ್ದು ಇಪರಿಹಾರ ವಿತರಿಸಲು ಕಾನೂನು ತೊಡಕು ಉಂಟಾಗುತ್ತಿದೆ ಎಂದು ಆರೋಪಿಸಿದರು. ತಹಸೀಲ್ದಾರ್ ಜಗದೀಶ್ ಪ್ರತಿಕ್ರಿಯಿಸಿ ಚುನಾವಣಾ ತುರ್ತು ಹಿನ್ನೆಲೆಯಲ್ಲಿ ಮನೆ ಹಾನಿ ಬಗ್ಗೆ ಅಂದಾಜು ಪರಿಹಾರ ವಿತರಣೆಯಲ್ಲಿ ವಿಳಂಬವಾಗುತ್ತಿದ್ದು ಕಾನೂನು ರೀತಿ ಪರಿಹಾರ ವಿತರಿಸುವ ಮೂಲಕ ನ್ಯಾಯ ದೊರಕಿಸುವುದಾಗಿ ತಿಳಿಸಿದರು.
2 ದೇವಸ್ಥಾನ ಗೋಡೆ ಕುಸಿತ
ಹೊಸನಗರ: ತಾಲೂಕಿನ ನಗರ ಹೋಬಳಿಯಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಎರಡು ದೇವಸ್ಥಾನಗಳ ಗೋಡೆ ಕುಸಿದಿವೆ. ಇತಿಹಾಸ ಪ್ರಸಿದ್ಧ ಪಾರ್ವತಿ ನೀಲಕಂಠೇಶ್ವರ ದೇಗುಲದ ಮಹಾದ್ವಾರ ಪೌಳಿಯ ಗೋಡೆ ಸಂಪೂರ್ಣ ಕುಸಿತ ಕಂಡಿದೆ. ಇದರ ಜೊತೆಗೆ ಪಕ್ಕದಲ್ಲೆ ಇರುವ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನದ ನವೀಕೃತ ಗೋಡೆ ಕೂಡ ಕುಸಿದಿದ್ದು, ಉಳಿದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಕುಸಿತ ಕಂಡಿದ್ದು, ದುರಸ್ತಿಗೆ ಸೂಕ್ತ ಪರಿಹಾರ ಒದಗಿಸುವಂತೆ ದೇವಳಗಳ ಸಮಿತಿ ಮನವಿ ಮಾಡಿದೆ. ಕಂದಾಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದರು.
Advertisement