ಸಾಗರ: ಇಲ್ಲಿನ ಅಡಕೆ ಪರಿಷ್ಕರಣೆ, ಮಾರಾಟ ಸಹಕಾರ ಸಂಘದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಚಾಲಿ ಅಡಕೆ ಸುಲಿಯುವ ಯಂತ್ರಕ್ಕೆ ಸಂಸ್ಥೆಯ ಸಂಸ್ಥಾಪಕ ಸದಸ್ಯ ವಿ.ನಾ.ಕೃಷ್ಣಮೂರ್ತಿ ಚಾಲನೆ ನೀಡಿದರು.
ಸಂಸ್ಥೆಯು ಬೆಳೆಗಾರರ ಹಿತ ಕಾಯುವ ನಿಟ್ಟಿನಲ್ಲಿ ಹೊಸ ಯಂತ್ರಗಳು ಆವಿಷ್ಕಾರಗೊಂಡಾಗ ಅದನ್ನು ಪರಿಚಯಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇಷ್ಟು ದೊಡ್ಡ ಅಡಕೆ ಸುಲಿಯುವ ಯಂತ್ರ ಪ್ರಥಮವಾಗಿ ಆವಿಷ್ಕಾರವಾಗಿದೆ. ಒಂದು ಗಂಟೆಗೆ 100 ಕೆಜಿ ಚಾಲಿ ಅಡಕೆ ಸುಲಿಯುವ ಸಾಮರ್ಥ್ಯ ಈ ಯಂತ್ರಕ್ಕೆ ಇದೆ. ಸಂಸ್ಥೆಯ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಅಡಕೆ ಬೆಳೆಯುವ ಜಾಗದಲ್ಲಿ ಅಳವಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಂತಹ ಯಂತ್ರಗಳ ಆವಿಷ್ಕಾರದಿಂದ ಬೆಳೆಗಾರರು ಎದುರಿಸುತ್ತಿರುವ ಕೂಲಿ ಸಮಸ್ಯೆಗೆ ಪರಿಹಾರ ದೊರಕಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಆರ್.ಎಸ್. ಗಿರಿ, ಪ್ರಸ್ತುತ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ಗಂಭೀರವಾಗಿದೆ. ಬೆಳೆಗಾರರ ಹಿತದೃಷ್ಟಿಯಿಂದ ಕೃಷಿಕಾರ್ಯಕ್ಕೆ ಸುಲಭವಾಗುವಂತಹ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಬೆಳೆಗಾರರ ರಕ್ಷಣೆಗೆ ಸದಾ ಬದ್ಧವಾಗಿದೆ. ಕಳೆದ ಬಾರಿ ಬೆಳೆಗಾರರಿಗೆ ಉಚಿತವಾಗಿ ಮೈಲುತುತ್ತು ವಿತರಿಸಲಾಗಿತ್ತು ಎಂದು ನೆನಪಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಬಿ.ಎ. ಇಂದೂಧರಗೌಡ, ರಾಮಸ್ವಾಮಿ, ಕಲ್ಯಾಣಪ್ಪ ಗೌಡ, ಖಂಡಿಕಾ ಸೂರ್ಯ ನಾರಾಯಣ್, ಶಶಿಧರ ಹರತಾಳ, ರಾಘವೇಂದ್ರ ಹೊಡಬಟ್ಟೆ, ಮನೆಘಟ್ಟ ತಿಮ್ಮಪ್ಪ ಹಾಜರಿದ್ದರು.
Advertisement