ಶಿವಮೊಗ್ಗ: ಜಿಲ್ಲಾದ್ಯಂತ ಭಾರಿ ಮಳೆಯಿಂದಾಗಿ ಬೆಳೆಹಾನಿ ಹೊರತುಪಡಿಸಿ ಸುಮಾರು 100 ಕೋಟಿಯಷ್ಟು ನಷ್ಟ ಸಂಭವಿಸಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದನ ಮುಗಿದ ನಂತರ ಜಿಲ್ಲೆಯ ನೆರೆಪೀಡಿತ ತೀರ್ಥಹಳ್ಳಿ, ಸಾಗರ, ಹೊಸನಗರ ಭಾಗಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಲ್ಲದೇ, ಅಧಿಕಾರಿಗಳ ಸಭೆ ನಡೆಸಿದ್ದೇನೆ. ಆದರೂ ಪ್ರತಿಪಕ್ಷಗಳು ವಿನಾಕಾರಣ ಆರೋಪ ಸರಿಯಲ್ಲ ಎಂದರು.
ಕಳೆದ ಒಂದು ವಾರದಿಂದ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕುಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಸೊರಬ ಸಹ ತಾಲೂಕಿನಲ್ಲೂ ಪ್ರವಾಹ ಉಂಟಾಗಿದ್ದು ಜಿಲ್ಲಾದ್ಯಂತ ಸುಮಾರು ರು. 50 ರಿಂದ ರು. 100 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ನಷ್ಟ ಸಂಭವಿಸಿದೆ. ಸಾಗರ ತಾಲೂಕು ಒಂದರಲ್ಲೇ ನಾಲ್ಕು ಸಾವಿರ ಎಕರೆ ಕೃಷಿ ಭೂಮಿಗೆ ನೀರು ನುಗ್ಗಿ ಬೆಳೆ ನಷ್ಟ ಸಂಭವಿಸಿದೆ. ಗದ್ದೆಗಳು ಜಲಾವೃತವಾಗಿವೆ. ಹೊಸನಗರ ತಾಲೂಕಿನ ಬಿದರಳ್ಳಿ, ಕಲ್ಲೂರು ಭಾಗಗಳಲ್ಲಿ ಸೇತುವೆ- ರಸ್ತೆ ಹಾನಿಯಾಗಿವೆ. ತೀರ್ಥಹಳ್ಳಿಯ ಬಹುತೇಕ ಕಡೆಗಳಲ್ಲಿ ಇದೇ ರೀತಿಯ ಅವಘಡಗಳು ಸಂಭವಿಸಿವೆ. ಬೆಳೆಹಾನಿಗೆ ರೈತರು ಯಾವುದೇ ಆತಂಕ ಪಡಬೇಕಿಲ್ಲ. ಆದಷ್ಟು ಶೀಘ್ರ ಪರಿಹಾರ ಬದಗಿಸಲಾಗುವುದು. ವಾಸ್ತವ ಹಾನಿ ಕುರಿತಂತೆ ಸರಿಯಾದ ಮಾಹಿತಿ ಸಂಗ್ರಹಿಸಿ ಪರಿಹಾರ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಕಿಮ್ಮನೆ ತಿಳಿಸಿದರು. ಸದ್ಯದ ಮಾಹಿತಿ ಪ್ರಕಾರ ಜಿಲ್ಲಾಡಳಿತ ಅಂದಾಜಿಸಿರುವಂತೆ ರು. 25-30 ಕೋಟಿ ನಷ್ಟ ಸಂಭವಿಸಿದೆ. ಹೆಚ್ಚಿನ ನೆರವಿಗೆ ಸಿಎಂಗೆ ಕೋರಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್, ಜಿ.ಪಂ.ಅಧ್ಯಕ್ಷ ಕಲಗೋಡು ರತ್ನಾಕರ್, ರಮೇಶ್ ಹೆಗಡೆ ಇದ್ದರು.
Advertisement