ಮುಂದುವರಿದ ವರ್ಷಧಾರೆ...

Updated on

ಶಿವಮೊಗ್ಗ/ ತೀರ್ಥಹಳ್ಳಿ: ಒಂದೆರಡು ದಿನದ ಬಿಡುವಿನ ನಂತರ ಮಲೆನಾಡಿನಲ್ಲಿ ಮತ್ತೆ ಜಡಿ ಮಳೆ ಮುಂದುವರಿದಿದೆ. ಹೊಸನಗರ ಮತ್ತು ತೀರ್ಥಹಳ್ಳಿ ಭಾಗದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮತ್ತೆ ಹಳ್ಳಕೊಳ್ಳಗಳು, ನದಿಗಳು ಪ್ರವಾಹ ಮಟ್ಟದಲ್ಲಿ ಹರಿಯುತ್ತಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.
ಹುಲಿಕಲ್‌ನಲ್ಲಿ ದಾಖಲೆಯ 24 ಸೆಂ.ಮೀ. ಮಳೆಯಾದರೆ, ಆಗುಂಬೆಯಲ್ಲಿ 22 ಸೆಂ.ಮೀ., ಹೊಸನಗರ 16 ಸೆಂ.ಮೀ. ಲಿಂಗನಮಕ್ಕಿ, ಹುಂಚದಕಟ್ಟೆಯಲ್ಲಿ 13 ಸೆಂ.ಮೀ, ತಾಳಗುಪ್ಪ, ತೀರ್ಥಹಳ್ಳಿಯಲ್ಲಿ 12 ಸೆಂ.ಮೀ, ಸಾಗರದಲ್ಲಿ 10 ಸೆಂ.ಮಿ., ತ್ಯಾಗರ್ತಿಯಲ್ಲಿ 7 ಸೆಂ.ಮೀ., ಅರಸಾಳು, ಸೊರಬದಲ್ಲಿ 5 ಸೆಂ.ಮೀ., ಶಿಕಾರಿಪುರ, ಶಿವಮೊಗ್ಗದಲ್ಲಿ 4 ಸೆಂ.ಮೀ. ಮಳೆ ದಾಖಲಾಗಿದೆ.
ಬುಧವಾರ ಮಧ್ಯಾಹ್ನ ನಂತರ ಶಿವಮೊಗ್ಗ- ತೀರ್ಥಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ ಮೇಲೆ ನದಿಯ ನೀರು ನಿಂತಿದ್ದರಿಂದ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಿದವು. ತೀರ್ಥಹಳ್ಳಿಯಲ್ಲೂ ತುಂಗಾ ನದಿ ಪ್ರವಾಹ ಮಟ್ಟದಲ್ಲಿಯೇ ಹರಿಯುತ್ತಿದೆ. ವಾರದ ಹಿಂದೆ ಬಿದ್ದ ಮಳೆಗೆ ರಸ್ತೆ, ಸೇತುವೆಗಳು ಹಾನಿಯಾದ ಕಡೆಗಳಲ್ಲೂ ಮಳೆ ಮುಂದುವರೆದಿರುವುದರಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ.
ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ.
ಜಲಾಶಯದ ಗರಿಷ್ಠ ಮಟ್ಟವು 1819 ಅಡಿಗಳಾಗಿದ್ದು, ಈಗಿನ ಜಲಾಶಯ ಮಟ್ಟ ಆಗಸ್ಟ್ 6ರಂದು ದಾಖಲಾದಂತೆ 1806.00 ಅಡಿಗೆ ತಲುಪಿದೆ. ಒಳಹರಿವು 79,979 ಕ್ಯುಸೆಕ್ ಇದ್ದು, ಜಲಾಶಯಕ್ಕೆ ಬರುವ ನೀರಿನ ಪ್ರಮಾಣ ಇದೇ ರೀತಿ ಮುಂದುವರಿದಲ್ಲಿ ಜಲಾಶಯ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇದೆ.
ಆದ್ದರಿಂದ ಆಣೆಕಟ್ಟು ಸುರಕ್ಷತಾ ದೃಷ್ಟಿಯಿಂದ, ಹೆಚ್ಚುವರಿಯಾದ ಜಲಾಶಯದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುವುದು ಎಂದು ಲಿಂಗನಮಕ್ಕಿ ಜಲಾಶಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಪಾತ್ರದುದ್ದ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ ಜಾನುವಾರು ವಗೈರೆಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಎಚ್ಚರಿಸಿದ್ದಾರೆ.
ಭದ್ರಾ ಜಲಾಶಯ ಕೂಡ ತುಂಬಿದ್ದು, 184 ಅಡಿ ನೀರಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿಗಳಾಗಿರುತ್ತದೆ. ಅದೇ ರೀತಿ ತುಂಗಾ ಜಲಾಶಯ ಸಹ ಭರ್ತಿಯಾಗಿದೆ. ಆಗಸ್ಟ್ 6ರ ಬೆಳಿಗ್ಗೆ 8 ಗಂಟೆಗೆ ದಾಖಲಾದಂತೆ ಹಿಂದಿನ 24 ಗಂಟೆಯಲ್ಲಿ ಶಿವಮೊಗ್ಗ ತಾಲೂಕಿನಲ್ಲಿ 31.20 ಮಿ.ಮೀ, ಭದ್ರಾವತಿಯಲ್ಲಿ 28.60, ತೀರ್ಥಹಳ್ಳಿ 117.60, ಸಾಗರ 97.20, ಶಿಕಾರಿಪುರ 39.00, ಸೊರಬ 52.20, ಹೊಸನಗರದಲ್ಲಿ 161.20 ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 527 ಮಿ.ಮೀ.ಮಳೆಯಾಗಿದೆ.

ಉಕ್ಕಿದ ಭದ್ರೆ
ಭದ್ರಾವತಿ: ಭದ್ರಾ ನದಿಯಲ್ಲಿ ಬುಧವಾರವೂ ಪ್ರವಾಹ ಉಕ್ಕಿ ಹರಿಯಿತು. ಸಾರಿಗೆ ಬಸ್ ನಿಲ್ದಾಣ ಬಳಿ ಇರುವ ಸೇತುವೆ ಮೇಲೆ ಮೂರೂವರೆ ಅಡಿಯಷ್ಟು ನೀರು ಹರಿಯುತ್ತಿತ್ತು. ಇಂದೂ ಕೂಡಾ ಸೇತುವೆ ಮೇಲೆ ವಾಹನ ಮತ್ತು ಜನಸಂಚಾರ ಸ್ಥಗಿತಗೊಳಿಸಲಾಗಿತ್ತು. ಭದ್ರಾವತಿಯಲ್ಲಿ ಭದ್ರಾ ನದಿಯ ಇಕ್ಕೆಲಗಳಲ್ಲಿ ತಗ್ಗು ಪ್ರದೇಶದಲ್ಲಿರುವ ಕವಲುಗುಂದಿ, ಏಕೆಂಶಾ ಕಾಲೋನಿ, ಗುಂಡೂರಾವ್ ಶೆಡ್‌ಗಳಲ್ಲಿನ ಸುಮಾರು 50 ಕುಟುಂಬ ಸಂಕಷ್ಟಕ್ಕೆ ಒಳಗಾಗಿವೆ. ಈ ಪ್ರದೇಶಗಳಲ್ಲಿ ನಾಲ್ಕು ಗಂಜಿ ಕೇಂದ್ರಗಳನ್ನು ತಾಲೂಕು ಆಡಳಿತ ತೆರೆದಿದೆ. ತಗ್ಗು ಪ್ರದೇಶದಲ್ಲಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಈಗಾಗಲೇ ಸೂಚನೆ ನೀಡಿದೆ.
ಈ ಭಾಗದಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸ್ ಗೃಹರಕ್ಷಕ ದಳದವರನ್ನು ಕಾವಲು ಹಾಕಲಾಗಿದೆ. ತಾಲೂಕು ಆಡಳಿತದ ನಾಲ್ಕು ತಂಡಗಳು ಮತ್ತು ಪೊಲೀಸ್ ಇಲಾಖೆ ಪ್ರವಾಹದ ಸ್ಥಿತಿಗತಿ ವೀಕ್ಷಿಸಲು ಆಗಾಗ ತಗ್ಗು ಪ್ರದೇಶಗಳಿಗೆ ಭೇಟಿ ನೀಡುತ್ತಿದೆ.

ಅಮ್ಮನಕೆರೆ ಕೋಡಿ
ಸಾಗರ: ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಭೀಮನೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭೀಮನೇರಿ ಗ್ರಾಮದ ಅಮ್ಮನಕೆರೆಯ ಕೋಡಿ ಒಡೆದು ಸುಮಾರು 10 ಎಕರೆ ಜಮೀನಿಗೆ ನೀರು ನುಗ್ಗಿದೆ. ಇದರಿಂದಾಗಿ ಜಮೀನಿನಲ್ಲಿ ನಾಟಿ ಮಾಡಿದ ಭತ್ತ ನೀರು ಪಾಲಾಗಿದ್ದು, ಸ್ಥಳಕ್ಕೆ ಭೀಮನೇರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಗಲ್ಲಿ ವೆಂಕಟೇಶ್ ಭೇಟಿ ನೀಡಿ ಪರಿಶೀಲಿಸಿದರು.  ಈ ಭಾಗದಲ್ಲಿ ಅತಿವೃಷ್ಠಿಯಿಂದ ವಿಪರೀತ ನಷ್ಟ ಸಂಭವಿಸಿದ್ದು, ಕೆರೆಕೋಡಿ ಒಡೆದು ಜಮೀನಿಗೆ ನೀರು ನುಗ್ಗಿರುವುದರಿಂದ ರೈತರು ಸಾಲಸೋಲ ಮಾಡಿ ಕೃಷಿಗೆ ತೊಡಗಿಸಿದ ಬಿತ್ತನೆಬೀಜ, ರಸಗೊಬ್ಬರ ನೀರು ಪಾಲಾಗಿದೆ. ತಾಲೂಕು ಆಡಳಿತ ತಕ್ಷಣ ರೈತರಿಗೆ ಪರಿಹಾರ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಅಜ್ಜಪ್ಪ, ರಾಮಪ್ಪ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com