ಶಿವಮೊಗ್ಗ: ಈ ವರ್ಷ ಮುಂಗಾರು ಮಳೆ ಕ್ಷೀಣಿಸಿದ್ದು, ಬರಗಾಲದ ಛಾಯೆ ಆವರಿಸಿದೆ. ಹೀಗಾಗಿ ರೈತರ ಸ್ಥಿತಿ ಚಿಂತಾಜನಕವಾಗಿದ್ದು, ಕೂಡಲೇ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಬಿಜೆಪಿ ರೈತ ಮೋರ್ಚಾ ಸರ್ಕಾರವನ್ನು ಒತ್ತಾಯಿಸಿದೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಬಿಜೆಪಿ ಕಾರ್ಯಕರ್ತರು, ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಜುಲೈ ತಿಂಗಳು ಆರಂಭವಾದರೂ ಬಿತ್ತನೆ ಕಾರ್ಯ ಪರಿಪೂರ್ಣವಾಗಿಲ್ಲ. ಈಗಾಗಲೇ ಅಲ್ಪ ಸ್ವಲ್ಪ ಮಳೆ ಆಗಿದ್ದು ಈ ಮಳೆಯನ್ನು ನಂಬಿ ಬಿತ್ತನೆ ಮಾಡಿದ ರೈತ ಬಿತ್ತನೆ ಬೀಜ, ಗೊಬ್ಬರವನ್ನು ಭೂಮಿಗೆ ಹಾಕಿದ್ದು ಬಿತ್ತಿದ ಬೀಜ ಹುಟ್ಟದೆ ನಶಿಸಿ ಹೋಗಿದೆ. ಹುಟ್ಟಿದ ಬೆಳೆಯೂ ಒಣಗುತ್ತಿದೆ, ಬೋರ್ವೆಲ್ನಲ್ಲಿ
ಅಂತರ್ಜಲ ಬತ್ತಿ ಕೊಳವೆ ಬಾವಿಗಳಲ್ಲಿ ನೀರಿಲ್ಲದಂತಾಗಿದೆ, ಕೆಲವು ಭಾಗಗಳಲ್ಲಿ ನೀರಿದ್ದರೂ ವಿದ್ಯುತ್ತಿನ ಕಣ್ಣಾಮುಚ್ಚಾಲೆಯಿಂದಾಗಿ ಬೆಳೆ ನಾಶವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೂಡಲೆ ಜಿಲ್ಲಾಡಳಿತ ರೈತರ ನೆರವಿಗೆ ಧಾವಿಸುವುದರ ಜೊತೆಗೆ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವುದರ ಮೂಲಕ ರೈತರಿಗೆ ಹೆಚ್ಚಿನ ನೆರವು ಹಾಗೂ ಅವಶ್ಯಕತೆಗಳನ್ನು ಪೂರೈಸಬೇಕು (ಬಿತ್ತನೆ ಬೀಜ, ಗೊಬ್ಬರ ಉಚಿತವಾಗಿ ಕೊಡಬೇಕು) ಈ ದಿಕ್ಕಿನಲ್ಲಿ ರೈತರ ಸಾಲವನ್ನು ದೀರ್ಘಾವಧಿಗೆ ಪರಿವರ್ತಿಸಿ ಹೊಸ ಬೆಳೆ ಸಾಲವನ್ನು ನೀಡಬೇಕು ಎಂದು ಆಗ್ರಹಿಸಿದರು.
ಡಿಕೆಶಿ ಬೇಜವಾಬ್ದಾರಿ ಹೇಳಿಕೆ: ಸದನದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ರೈತರಿಗೆ ವಿದ್ಯುತ್ ಪೂರೈಕೆ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದ ಮುಖಂಡರು, ಇಂತಹ ಸಂದರ್ಭದಲ್ಲಿ ರೈತರಿಗೆ ಆತ್ಮ ವಿಶ್ವಾಸ ನೀಡಬೇಕಾದ ಸರ್ಕಾರವೇ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡಬಾರದು ಎಂದರು.
ದೇವರೇ ಬಂದು ಕಾಪಾಡುವುದಾದರೇ ಸರ್ಕಾರದ ಅವಶ್ಯಕತೆಯಾದರೂ ಯಾಕೆ? ಇಂತಹ ಬೇಜವಾಬ್ಧಾರಿ ಹೇಳಿಕೆ ನೀಡುವ ಇಂಧನ ಸಚಿವರಾದರೂ ಯಾಕೆ ಬೇಕು. ಹತ್ತಾರು ವರ್ಷಗಳಿಂದ ರೈತರ ಪಂಪ್ಸೆಟ್ಗಳಿಗೆ ಹಿಂದಿನ ಸರ್ಕಾರಗಳು ಉಚಿತವಾಗಿ ವಿದ್ಯುತ್ ಪೂರೈಸುತ್ತಿದ್ದು, ವಿದ್ಯಾಭ್ಯಾಸ, ಉದ್ಯೋಗ, ಆಶ್ರಯ, ಆರೋಗ್ಯ ಸೇರಿದಂತೆ ಇದೂ ಸಹ ಸೇವೆಯೆಂದು ಪರಿಗಣಿಸಿ ಉಚಿತ ವಿದ್ಯುತ್ ಪೂರೈಸುತ್ತಿದ್ದುದು ಸರಿಯಷ್ಟೆ.
ಸಂಘಟನೆಯ ಮುಖಂಡ ಎಸ್.ದತ್ತಾತ್ರಿ, ಡಿ.ಎಸ್.ಅರುಣ, ಎಂ.ಎಸ್.ಮಹೇಂದ್ರನಾಥ್, ರತ್ನಾಕರ ಶೆಣೈ, ಎಚ್.ಸಿ.ಬಸವರಾಜಪ್ಪ, ಸುಧಾಕರ, ಬಿ.ಟಿ.ಈಶ್ವರಪ್ಪ, ಜಗದೀಶ್ ಇದ್ದರು.
ತಪ್ಪು ದಾರಿಗೆ
ಈಗಿನ ಸರ್ಕಾರ ರೈತರಿಗೆ ಶೇ.40ರಷ್ಟು ವಿದ್ಯುತ್ ಕೊಡುತ್ತಿದ್ದೇವೆಂದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ರು. 7500 ಕೋಟಿ ನಷ್ಟ ಆಗುತ್ತಿದೆಯೆಂಬ ಅಂಕಿ ಅಂಶವನ್ನು ಸದನಕ್ಕೆ ನೀಡಿ ಸದನವನ್ನು ತಪ್ಪುದಾರಿಗೆ ಎಳೆಯುವುದರ ಮೂಲಕ ರೈತರಿಗೆ ಯಾಕೆ ಉಚಿತ ವಿದ್ಯುತ್ ನೀಡಬೇಕು ಎಂದು ಪ್ರಶ್ನಿಸುವ ರೈತ ವಿರೋಧಿ ಧೋರಣೆಯನ್ನು ಪ್ರದರ್ಶಿಸುತ್ತಿದ್ದಾರೆ. ಇಂಥವರು ಸಚಿವರಾಗಿ ಮುಂದುವರೆಯಬಾರದು ಕೂಡಲೇ ರಾಜಿನಾಮೆ ನೀಡಬೇಕು ಎಂದು ಒತ್ತಾಯಸಿದರು.