ತ್ಯಾಗರ್ತಿ: ಸಾಗರ ತಾಲೂಕು ಹಿರೇಬಿಲಗುಂಜಿ ಗ್ರಾಪಂವ್ಯಾಪ್ತಿಯ ಸ್ಟೇಷನ್ ಅಡ್ಡೇರಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ ಕೂಡಲೇ ಮಧ್ಯಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಡ್ಡೇರಿ ಮತ್ತು ಕೆಳಗಿನ ಮನೆ ಗ್ರಾಮದ ಸ್ತ್ರೀ ಶಕ್ತಿ ಮತ್ತು ಯುವಕ ಸಂಘದ ಕಾರ್ಯಕರ್ತರು ಹಿರೇಬಿಲಗುಂಜಿ ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು.
ಸಾಗರ ತಾಲೂಕಿನ ಹಿರೇಬಿಲಗುಂಜಿ ಗ್ರಾಪಂ ವ್ಯಾಪ್ತಿಯ ಅಡ್ಡೇರಿ ಗ್ರಾಮದಲ್ಲಿ ನಕಲಿ ಮದ್ಯ ಮಾರಾಟಕ್ಕೆ ಸಹಕಾರಿಯಾಗುವಂತೆ ದಿನಸಿ ಅಂಗಡಿ ನಡೆಸುತ್ತಿದ್ದ ನಾಗರಾಜ(ಐಯ್ಯಣ್ಣ), ಮತ್ತು ಆನಂದ ಪೂಜಾರಿ ಎಂಬುವವರ ಅಂಗಡಿಯ ಎದುರು ಈ ಹಿಂದೆ ಪ್ರತಿಭಟನೆ ನಡೆಸಿ 4 ದಿನಗಳ ಕಾಲಾವಕಾಶ ನೀಡಿದ್ದರೂ ಮದ್ಯ ಮಾರಾಟವನ್ನು ನಿಲ್ಲಿಸದೇ ಇದ್ದಿದ್ದರಿಂದ ಆಕ್ರೋಶಗೊಂಡ ಜನರು ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು.
ಕೂಡಲೇ ಈ ಅಂಗಡಿಗಳನ್ನು ಮುಚ್ಚಿಸಿ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸ್ತ್ರೀ ಶಕ್ತಿ ಹಾಗೂ ಯುವಕ ಸಂಘದ ಸದಸ್ಯರು ಹಿರೇಬಿಲಗುಂಜಿ ಪಿಡಿಒ ಆಷ್ಪಕ್ ಅಹಮದ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಶೋಕ್ ಮತ್ತು ರಾಮಚಂದ್ರ ಅಡ್ಡೇರಿ ಮಾತನಾಡಿ ನಕಲಿ ಮದ್ಯ ಮಾರಾಟವನ್ನು ಕೂಡಲೇ ಸ್ಥಗಿತಗೊಳಿಸದಿದ್ದರೆ ಸಾಗರ ಉಪವಿಭಾಗಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ಪಿಡಿಒ ಆಷ್ಪಕ್ ಅಹಮದ್, ಜೂ.10ರಂದು ನಡೆದ ಗ್ರಾಮ ಸಭೆಯಲ್ಲಿ ಈ ವಿಷಯ ಚರ್ಚೆಯಾಗಿದ್ದು ಸಮರ್ಪಕ ಮಾಹಿತಿ ಇಲ್ಲದೇ ಇರುವುದರಿಂದ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಕಳುಹಿಸುತ್ತೇನೆ ಎಂದರು.
ಹಿರೇಬಿಲಗುಂಜಿ ಗ್ರಾಪಂ ಉಪಾಧ್ಯಕ್ಷರಾದ ರತ್ನಮ್ಮ, ಸದಸ್ಯರಾದ ಜಗದೀಶ್ ನೀಚಡಿ, ಕೃಷ್ಣಮೂರ್ತಿ ಹೊಸಂತೆ ಹಾಗೂ ರಾಜೇಶ್ವರೀ, ಭೂತೇಶ್ವರೀ, ವನಶ್ರೀ, ಚೌಡೇಶ್ವರೀ, ಸ್ತ್ರೀ ಶಕ್ತಿ ಸಂಘದ ಸದಸ್ಯರಾದ ವಿನೋದಾ, ನಾಗರತ್ನ, ಲೀಲಾವತಿ, ಶೇಖರಮ್ಮ, ಹೇಮಾವತಿ, ಕಾಂತುಮಣಿ ರೇಣುಕಾ, ವನಜಾ, ಸಂಘದ ಪದಾಧಿಕಾರಿಗಳಾದ ರಾಘವೇಂದ್ರ, ಲೋಕೇಶ, ರಾಮಚಂದ್ರ, ರಾಮಪ್ಪ.ಡಿ, ಸುರೇಶ.ಎಚ್, ವೀರಭದ್ರಪ್ಪ, ಸೀತಾರಾಮ, ನವೀನ, ಕಮಲೇಶ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.