ನಕಲಿ ತುಪ್ಪ ಜಾಲ ಪತ್ತೆ

Updated on: 

ಭದ್ರಾವತಿ: ಪ್ರತಿಷ್ಠಿತ ಕಂಪನಿಗಳ ಬಾಟಲ್, ಪೌಚ್ ಹಾಗೂ ಡಬ್ಬಗಳಲ್ಲಿ ನಕಲಿ ತುಪ್ಪವನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಭದ್ರಾವತಿ ನ್ಯೂಟೌನ್ ಪೊಲೀಸರು ಮಂಗಳವಾರ ಪತ್ತೆ ಹಚ್ಚಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವಾಹನ ಚಾಲಕ ಸೇರಿದಂತೆ ಇಬ್ಬರನ್ನು ಬಂಧಿಸಿ ತುಪ್ಪ ಮಾರಾಟಕ್ಕೆ ಬಳಸಲಾಗಿದ್ದ  ಮಾರುತಿ ವ್ಯಾನನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಖಚಿತ ವರ್ತಮಾನದ ಮೇರೆಗೆ ಡಿವೈಎಸ್ಪಿ ಸದಾನಂದ ಬಿ.ನಾಯಕ್, ಸಿಪಿಐ ಜೆ.ಜೆ.ತಿರುಮಲೇಶ್, ನ್ಯೂ ಟೌನ್ ಎಸ್‌ಐ ಸಂದೀಪ್, ಸಿಬ್ಬಂದಿ ಲಕ್ಷ್ಮಿನಾರಾಯಣ, ಬಸವರಾಜ್, ರವಿಕುಮಾರ್, ರೇವಣಸಿದ್ದಪ್ಪ, ನಾಗರಾಜ ಗುಳ್ಳಪ್ಪ, ಆಹಾರ ಇಲಾಖೆಯ ಗಾಯತ್ರಿ, ಸರಸ್ವತಿ ಹಾಗೂ ಶಿವಮೊಗ್ಗ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪರಿಶೀಲನಾ ಪ್ರಾಧಿಕಾರದ ಅಧಿಕಾರಿ ಡಾ. ಬಿ.ವಸಂತಕುಮಾರ್ ಕಾರ್ಯಾಚರಣೆಯಲ್ಲಿದ್ದರು.
ಮಂಗಳವಾರ ಪಟ್ಟಣದ ಜನ್ನಾಪುರದಲ್ಲಿರುವ ವಿಐಎಸ್‌ಎಲ್ ಕಾರ್ಖಾನೆಗೆ ಸೇರಿದ ರಾಮಕೃಷ್ಣ ಎಂಬವರ ಹೆಸರಿನಲ್ಲಿ ನೀಡಲಾಗಿರುವ ಮನೆ ಮೇಲೆ ದಾಳಿ ಮಾಡಿದರು. ಮನೆಯಲ್ಲಿ ತುಪ್ಪ ಮಾಡುವ ವಿವಿಧ ಪ್ರತಿಷ್ಠಿತ ನಂದಿನಿ, ಗೋಪಿಕಾ, ಅನು, ಜ್ಯೋತಿ, ತೇಜ ಕಂಪನಿಗಳ ಹೆಸರಿನಲ್ಲಿರುವ ಪೌಚ್‌ಗಳು, ಬಾಟಲ್‌ಗಳು ಮತ್ತು ಡಬ್ಬಗಳು ಹಾಗೂ ಡಾಲ್ಡಾ ಸೇರಿದಂತೆ ಸ್ಥಳೀಯವಾಗಿ ತಯಾರಿಸಲ್ಪಟ್ಟ ವಿವಿಧ ಕೊಬ್ಬುಗಳ ಶೇಖರಣೆ ಕಂಡುಬಂದಿದೆ.
ಪ್ರತಿಷ್ಠಿತ ಕಂಪನಿಗಳ ತುಪ್ಪ ಖರೀದಿಸಿ ಅದನ್ನು ಕಲಬೆರಕೆ ಮಾಡಿ ಮತ್ತೆ ಪ್ರತಿಷ್ಠಿತ ಕಂಪನಿಗಳ ಹೆಸರುಳ್ಳ ಪೌಚ್‌ಗಳು, ಬಾಟಲ್‌ಗಳು ಮತ್ತು ಡಬ್ಬಗಳಲ್ಲಿ ತುಂಬಿ ಸೀಲ್ ಮಾಡಿ ಅದನ್ನು ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಸೊರಬ, ಶಿಕಾರಿಪುರಗಳಲ್ಲಿ ಮಾರಾಟ ಮಾಡಲಾಗುತ್ತಿತ್ತೆಂದು ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾನ್ ಚಾಲಕ ಕುಶಾಲ್‌ಕುಮಾರ್ ಹಾಗೂ ಜನ್ನಾಪುರ ವಾಸಿ ಶ್ರೀನಿವಾಸ ಅಲಿಯಾಸ್ ಬೆಣ್ಣೆವಾಸುರನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com