ಶಿವಮೊಗ್ಗ: ಮಲೆನಾಡಿನಾದ್ಯಂತ ಮಳೆ ಮುಂದುವರಿದಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ ಭಾರಿ ನೀರು ಹರಿದುಬರುತ್ತಿದ್ದು, ಒಂದೇ ದಿನದಲ್ಲಿ ನೀರಿನ ಮಟ್ಟ 4 ಅಡಿ ಹೆಚ್ಚಳವಾಗಿದೆ. ಕಳೆದ ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಗದ್ವಿಖ್ಯಾತ ಜೋಗ ಜಲಪಾತದಲ್ಲಿ ಗತ ವೈಭವ ಮರುಕಳಿಸಲಾರಂಭಿಸಿದೆ.
ಜಲಪಾತದ ರಾಜಾ, ರೋರರ್, ರಾಕೆಟ್ ಮತ್ತು ರಾಣಿ ಜಲಧಾರೆಗಳಲ್ಲಿ ನೀರು ಧುಮ್ಮಿಕ್ಕುತ್ತಿದ್ದು, ಬೆಳ್ಳಿಗೆರೆಗಳೂ- ಹಾಲಿನ ಸೌಂದರ್ಯವೂ ಎಂಬಂತೆ ರಮಣೀಯ ಪ್ರಕೃತಿ ಸೌಂದರ್ಯಕ್ಕೆ ತಿಲಕವಿಟ್ಟಂತೆ ಕಾಣುತ್ತಿದೆ.
ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಮಂಜು-ಮುಸುಕಿನ ನಡುವೆ ಆಗೊಮ್ಮೆ ಈಗೊಮ್ಮೆ ದರ್ಶನ ನೀಡುವ ಜಲಪಾತದ ಸೊಬಗನ್ನು ಸವಿಯಲು ಕಾಯುವುದು ಅನಿವಾರ್ಯವಾಗಿದೆ.
ಇತ್ತ ತುಂಗಾ ನದಿ ಪ್ರವಾಹದಿಂದ ಮಂಡಗದ್ದೆ ಪಕ್ಷಿಧಾಮ ಇನ್ನೂ ಜಲಾವೃತವಾಗಿದೆ. ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಸಮಾಧಾನ ಪಡುವಂತೆ ಜಲಾಶಯದ ನೀರಿನ ಸಂಗ್ರಹ ಏರುತ್ತಿದೆ. ಇಲ್ಲಿಯೂ ಸಹ ಒಂದೇ ದಿನದಲ್ಲಿ 2 ಅಡಿ ಏರಿಕೆ ಕಂಡಿದೆ.