ಶ್ರೀಕಾಂತ ಭಟ್
ಶಿವಮೊಗ್ಗ: ತೀರ್ಥಹಳ್ಳಿ ಸಮೀಪ ಇರುವ, ಹೊಸನಗರ ತಾಲೂಕಿಗೆ ಸೇರಿದ ಕೋರ್ನಕೋಟೆ ಕುಗ್ರಾಮ ಹೆಚ್ಚು ಪ್ರಚಾರಕ್ಕೆ ಬಂದಿದ್ದು ನಕ್ಸಲ್ ಖ್ಯಾತಿಯಿಂದಾಗಿ. ಇಲ್ಲಿನ ಮೂಲಭೂತ ಸೌಲಭ್ಯ ಕೊರತೆಯನ್ನು ಬಂಡವಾಳವಾಗಿಸಿಕೊಂಡ ನಕ್ಸಲರು ಇಲ್ಲಿ ನೆಲೆ ನಿಂತಿದ್ದರು. ಈ ಗ್ರಾಮದ ಕೃಷ್ಣ ನಕ್ಸಲ್ ತಂಡದಲ್ಲಿ ಸೇರಿಕೊಂಡಿದ್ದು ಮತ್ತೊಂದಿಷ್ಟು ಪ್ರಚಾರಕ್ಕೆ ಬಂದಿತ್ತು.
ಇದೆಲ್ಲಾ ದಶಕದ ಹಿಂದಿನ ಕಥೆ. ನಕ್ಸಲ್ ಕೃಷ್ಣ ಈಗ ಮುಖ್ಯವಾಹಿನಿಗೆ ಬಂದಿದ್ದಾಗಿದೆ. ಸರ್ಕಾರ ನಕ್ಸಲ್ ಪ್ಯಾಕೇಜ್ ಎಂದು ಒಂದಷ್ಟು ಹಣ ಖರ್ಚು ಮಾಡಿ ಕೈತೊಳೆದುಕೊಂಡಿದೆ. ಇನ್ನೊಂದೆಡೆ ಜಿಲ್ಲಾಡಳಿತ ಪ್ರತಿ ತಿಂಗಳು ಸಭೆ ನಡೆಸಿ ತಾವೇನೋ ಸಾಧಿಸಿದ್ದೇವೆಂದು ಬೀಗುತ್ತಿದೆ. ಆದರೆ, ಕೋರ್ನಕೋಟೆ ಚಿತ್ರಣ ಮಾತ್ರ ಕಿಂಚಿತ್ತೂ ಬದಲಾಗಲೇ ಇಲ್ಲ.ಬೇಸಿಗೆಯಲ್ಲಿ ಕುಡಿವ ನೀರಿಗೆ ತತ್ತರಿಸಿ ಹೋಗಿದ್ದ 47 ಮನೆಗಳು ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ಸಂದೇಶ ರವಾನಿಸಿತ್ತು. ಇಂದು ಮತದಾನ ಬಹಿಷ್ಕರಿಸಿದ್ದೇವೆ, ಮುಂದೆ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನೂ ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥರು ಗುಡುಗಿದ್ದರು.ಇದಾದ ಮೇಲೆ ಹೊಸನಗರದಿಂದ ಆಗಮಿಸಿದ್ದ ತಹಶೀಲ್ದಾರ್, ರಸ್ತೆ ಮಾಡಿಸಿ ಕೊಡುತ್ತೇವೆ, ನೀರಿನ ವ್ಯವಸ್ಥೆ ಮಾಡಿಕೊಡುತ್ತೇವೆಂದು ಹೇಳಿ ಹೋದವರು ಮತ್ತೆ ಅತ್ತ ತಲೆಹಾಕಲೇ ಇಲ್ಲ. ಅವರಿರಲಿ, ಯಾವುದೇ ಇಲಾಖೆ ಅಧಿಕಾರಿಗಳು ಬರಲಿಲ್ಲ.
ಮತ್ತಷ್ಟು ಬಿಗಡಾಯಿಸಿದ ಸಮಸ್ಯೆ: ಇದೀಗ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ತೀರ್ಥಹಳ್ಳಿ-ಆಗುಂಬೆ ರಸ್ತೆಯ ನಾಲೂರಿನಿಂದ ಬಲಕ್ಕೆ ಸಾಗುವ ಕೋರ್ನಕೋಟೆ ಗ್ರಾಮದ ರಸ್ತೆ ಮೇಲೆ ಭಾರೀ ಗಾತ್ರದ ಮರವೊಂದು ಬಿದ್ದು 13 ದಿನ ಕಳೆದಿದೆ. ಗ್ರಾಮದ ರಸ್ತೆ ಸಂಪರ್ಕ ಸಂಪೂರ್ಣ ಕಡಿದುಹೋಗಿದೆ. ಆಟೋ ಓಡಿಸಿ ಜೀವನ ಸಾಗಿಸುವ ರಾಜು ಅವರು ಕಳೆದ 12 ದಿನಗಳಿಂದ ಆಟೋಗಳನ್ನು ಮನೆಯಲ್ಲಿ ನಿಲ್ಲಿಸಿಕೊಂಡು ಪರದಾಡುತ್ತಿದ್ದಾರೆ. ಇನ್ನು ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವೃದ್ಧರು, ಅದರಲ್ಲೂ ಆರೋಗ್ಯ ಸಮಸ್ಯೆ ಇರುವವರ ಪರದಾಟವಂತೂ ಹೇಳತೀರದು. ಗ್ರಾಮದಲ್ಲಿ ಗರ್ಭಿಣಿಯರಿದ್ದಾರೆ, ಹೆರಿಗೆಗೆ ದಿನ ಹತ್ತಿರ ಇರುವವರೂ ಇದ್ದಾರೆ. ಇಷ್ಟೆಲ್ಲಾ ಆದರೂ, ಅಧಿಕಾರಿಗಳು ಮಾತ್ರ ಈ ಗ್ರಾಮಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕುತ್ತಾರೆ. ಶಾಲೆ, ಅಂಗನವಾಡಿಗೆ ಮಕ್ಕಳು ಬರಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರಿಗೂ ಶಾಲೆ ತಲುಪಲು ಸಾಧ್ಯವಿಲ್ಲ. ರಸ್ತೆಗೆ ಬಿದ್ದ ಮರವನ್ನು ಬದಿಗೆ ಸರಿಸುವಂತೆ ಗ್ರಾಮ ಪಂಚಾಯಿತಿಯವರೇ ದೂರುಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಕನ್ನಡಪ್ರಭಕ್ಕೆ ತಿಳಿಸಿದರು.
ಸರ್ಕಾರದ ವಿರುದ್ಧ ಸೆಡ್ಡು: ಇನ್ನೊಂದೆಡೆ ಸರ್ಕಾರದ ವಿರುದ್ಧ ಸೆಡ್ಡು ಹೊಡೆದಿರುವ ಗ್ರಾಮಸ್ಥರು ಮತದಾನ ಬಹಿಷ್ಕಾರದ ನಂತರ ನಡೆದಿರುವ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ಬಹಿಷ್ಕರಿಸುತ್ತಾ ಬಂದಿದ್ದಾರೆ. ಮಂಗಳವಾರ ನಡೆದ ಗ್ರಾಮಸಭೆಯನ್ನೂ ಬಹಿಷ್ಕರಿಸಿ ಜಿಲ್ಲಾಡಳಿತಕ್ಕೆ ಸಂದೇಶ ರವಾನಿಸಿದ್ದಾರೆ. ಪ್ರತಿ ತಿಂಗಳು ಚಾಚೂತಪ್ಪದೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ಸರ್ಕಾರಕ್ಕೆ ಅಭಿವೃದ್ಧಿಯ ಲೆಕ್ಕ ಕೊಡುವ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ಒಮ್ಮೆಯಾದರೂ ಕೋರ್ನಕೋಟೆ ಗ್ರಾಮಕ್ಕೆ ಭೇಟಿ ಕೊಟ್ಟರೆ ಜನರ ಸಮಸ್ಯೆ ಅರ್ಥವಾಗಬಹುದೇನೋ.
ಆಟೋ ಚಾಲೂ ಮಾಡಿ ಮೊಬೈಲ್ ಚಾರ್ಜ್
ಕಳೆದ 15 ದಿನಗಳಲ್ಲಿ ಗ್ರಾಮಕ್ಕೆ ಕನಿಷ್ಠ ವೆಂದರೆ 2-3 ಗಂಟೆಯಷ್ಟೇ ವಿದ್ಯುತ್ ಸರಬರಾಜು ಆಗಿರಬಹುದಷ್ಟೆ. ಚಾರ್ಜ್ ಇಲ್ಲದೇ ಮೊಬೈಲ್ಗಳೂ ಸ್ಥಬ್ಧವಾಗಿವೆ. ಆಟೋ ಚಾಲೂ ಮಾಡಿ ಮೊಬೈಲ್ ಚಾರ್ಜ್ ಮಾಡಿ ಅಧಿಕಾರಿಗಳಿಗೆ ದೂರು ಕೊಡುವ ಸ್ಥಿತಿ ಉಂಟಾಗಿದೆ.