ಶಿವಮೊಗ್ಗ: ಶಾಲೆ ಬಿಟ್ಟ ಮಕ್ಕಳಿಗೆ ಶಿಕ್ಷಣ ನೀಡಿಕೆಗಾಗಿ ಗೆಜ್ಜೇನಹಳ್ಳಿಯಲ್ಲಿ ಬುಧವಾರದಿಂದ ಟೆಂಟ್ ಶಾಲೆ ಆರಂಭವಾಗಿದೆ. ಗೆಜ್ಜೇನಹಳ್ಳಿ ಸುತ್ತಮುತ್ತಲಿನ ಕಲ್ಲು ಗಣಿಕಾರಿಕೆ ಕಾರ್ಮಿಕರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದು, ಇವರ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ತಾತ್ಕಾಲಿಕ ಟೆಂಟ್ ನಿರ್ಮಿಸಿ ಶಾಲೆ ಆರಂಭಿಸಲಾಗಿದೆ. ಇಲ್ಲಿ 6 ರಿಂದ 14 ವಯೋವಾನದ ಮಕ್ಕಳನ್ನು ಸೇರಿಸಿಕೊಳ್ಳಲಾಗಿದೆ. ಟೆಂಟ್ ಶಾಲೆ ಉದ್ಘಾಟಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜಪ್ಪ ಮಾತನಾಡಿ, ಸರ್ಕಾರ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೊಳಿಸುವ ಮೂಲಕ 6 ರಿಂದ 14 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಿಕೆ ಜಾರಿಗೊಳಿಸಿದೆ. ಪೋಷಕರು, ಸರ್ಕಾರೇತರ ಸಂಸ್ಥೆಗಳು ಕೂಡ ಸಹಕರಿಸುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಲೇಖನ ಸಾಮಗ್ರಿ, ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು. ಎಸ್ಎಸ್ಎ ಎಪಿಸಿ ನಂಜರಾಜ, ವಿಷಯ ಪರಿವೀಕ್ಷಕ ಅಬ್ದುಲ್ ಗಫಾರ್ಮುಲ್ಲಾ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಕೆ.ಬಿ ಲೋಕೇಶಪ್ಪ, ಸಿ.ಆರ್.ಪಿ ಪ್ರೇಮಲತಾ, ಡಾಕ್ಯಾ ನಾಯ್ಕ್, ಶಿವಕುಮಾರ್ ಉಪಸ್ಥಿತರಿದ್ದರು.