ಅಂಜನಾಪುರ ಜಲಾಶಯ ಭರ್ತಿ

Updated on: 

ಗೋಡ್‌ಬೋಲೆ ಮೇಲೆ ಉಕ್ಕಿ ಹರಿದ ನೀರು
ಶಿಕಾರಿಪುರ: ತಾಲೂಕಿನ ಸಹಸ್ರಾರು ಎಕರೆ ಜಮೀನಿಗೆ ನೀರುಣಿಸುವ ಬೃಹತ್ ಅಂಜನಾಪುರ ಜಲಾಶಯ ಭರ್ತಿಯಾಗಿದ್ದು, ಪ್ರಸಿದ್ಧ ಗೋಡ್‌ಬೋಲೆ ಮೇಲೆ ನೀರು ಉಕ್ಕಿ ಹರಿಯುವ ಮೂಲಕ ತಾಲೂಕಿನ ಜನತೆ, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಕಳೆದ ವಾರದಿಂದ ಸುರಿದ ಬಾರೀ ಮಳೆಯಿಂದಾಗಿ ಅಂಜನಾಪುರ ಜಲಾಶಯ ಭರ್ತಿಯಾಗಿದ್ದು ಇದರಿಂದಾಗಿ ತಾಲೂಕಿನ ರೈತರ ಸಹಿತ ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾದಂತಾಗಿದೆ. ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ಯಡಿಯೂರಪ್ಪನವರು ನೇರವಾಗಿ ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣದ ಜನತೆಗೆ ಕೋಟ್ಯಾಂತರ ರು. ವೆಚ್ಚದಲ್ಲಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿದ್ದರು. ಆದರೆ ಕಳೆದ ತಿಂಗಳ ಅಂತ್ಯದಲ್ಲಿ ಮಳೆಯಿಲ್ಲದೆ ಕಂಗಾಲಾಗಿದ್ದ ಜನತೆ ಹಾಗೂ ರೈತರಿಗೆ ಇದೀಗ ಸುರಿದ ಬಾರಿ ಮಳೆಯಿಂದಾಗಿ ಜಲಾಶಯ ಭರ್ತಿಯಾಗಿರುವುದು ಮಂದಹಛಾಸ ಮೂಡಿದೆ.
ಮಳೆಗಾಲದಲ್ಲಿ ಭರ್ತಿಯಾದ ಜಲಾಶಯ ಅಂದಾಜು 35 ಕಿ.ಮೀ ಸುತ್ತಳತೆ ಹೊಂದಿದ್ದು 1.5 ಟಿ.ಎಂ.ಸಿ ಸಂಗ್ರಹ ಸಾಮರ್ಥ್ಯ ಹೊಂದಿದ ತಾಲೂಕಿನ ಬಹು ದೊಡ್ಡ ಜಲಾಶಯ. ನೀರು ಸಂಗ್ರಹಕ್ಕಾಗಿ ಅಳವಡಿಸಲಾದ ವಿಶ್ವದಲ್ಲಿಯೇ ಅಪರೂಪದ ಗೋಡ್‌ಬೋಲೆ 72 ಗೇಟುಗಳು ಸ್ವಯಂಚಾಲಿತವಾಗಿ ತೆರೆದುಕೊಂಡು ಹೆಚ್ಚುವರಿ ನೀರು ಹೊರಬರುತ್ತದೆ. ಈ ದೃಶ್ಯ ಪ್ರವಾಸಿಗರ ಕಣ್ಮನ ಸೆಳೆಯಲಿದ್ದು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಆಗಮಿಸುತ್ತಾರೆ.
6700 ಹೆಕ್ಟೇರ್ ಜಮೀನಿಗೆ ನೀರುಣಿಸುವ ಜಲಾಶಯ ಭರ್ತಿಯಾಗಿ ಗೇಟ್ ಮೇಲೆ ನೀರು ಹರಿಯುವ ದೃಶ್ಯ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಸ್ಥಳದಲ್ಲಿ ಮಾಹಿತಿ ಫಲಕ, ಎಚ್ಚರಿಕೆ ಫಲಕದ ಜತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರ ಹಾಗೂ ಸ್ಥಳೀಯ ಆಡಳಿತ ನಿರ್ಲಕ್ಷತಾಳಿದ್ದು, ಪ್ರವಾಸಿಗರು ಮಳೆಯಲ್ಲಿ ನೆನೆದು ಹಿಡಿಶಾಪ ಹಾಕುವಂತಾಗಿದೆ ಎಂದು ನವಚೈತನ್ಯ ಕರ್ನಾಟಕ ಸೇನೆ ಸ್ಥಳೀಯ ಘಟಕದ ಅಧ್ಯಕ್ಷ ಪ್ರಶಾಂತ್ ಪೂಜಾರ್  ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮೀಪದಲ್ಲಿ ಕನಿಷ್ಠ ವಿಶ್ರಮಿಸುವ ವ್ಯವಸ್ಥೆ ಕೂಡ ಇಲ್ಲದಿರುವುದು ಪ್ರವಾಸಿಗರನ್ನು ಹೆಚ್ಚು ಹೆಚ್ಚು ಆಕರ್ಷಿಸುವಲ್ಲಿ ವಿಫಲವಾಗುತ್ತಿದ್ದು, ಈ ಕೂಡಲೇ ಸೂಕ್ತ ಸ್ಥಳದಲ್ಲಿ ವಾಹನ ನಿಲ್ದಾಣ, ವಿಶ್ರಾಂತಿಗಾಗಿ ಕೊಠಡಿ ನಿರ್ಮಿಸುವ ಮೂಲಕ ಸುಂದರ ಪ್ರವಾಸಿ ತಾಣವನ್ನಾಗಿಸುವಂತೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com