ಹೊಸನಗರ: ಎಡಬಿಡದೆ ಸುರಿದ ಮಳೆಗೆ ಭಾರೀ ಭೂ ಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿದು ಹೋಗಿದೆ. ಜತೆಗೆ ಅಡಕೆ ಸೇರಿದಂತೆ ಇತ್ಯಾದಿ ಬೆಳೆಗಳಿದ್ದ 10 ಎಕರೆ ಜಮೀನಿಗೆ ಹಾನಿ ಸಂಭವಿಸಿದ ಘಟನೆ ತಾಲೂಕಿನ ನಗರ ಸಮೀಪ ಬೈಸೆ ಗ್ರಾಮದ ಜಾಮಿಜಡ್ಡು ಬಳಿ ನಡೆದಿದೆ.
ಸುಮಾರು 100 ಅಡಿ ಸುತ್ತಳತೆಯಲಿ ಧರೆ ಕುಸಿದಿದ್ದು, ಧರೆ ಕೆಳಭಾಗದ ಹಳ್ಳ ಮುಚ್ಚಿ ಹೋಗಿ, ನೀರು ಶಿವರಾಮು ಉಪಾಧ್ಯಾಯ ಮತ್ತು ನಾರಾಯಣ ಉಪಾಧ್ಯಾಯ ಎಂಬುವರ ಅಡಕೆ ತೋಟಕ್ಕೆ ನುಗ್ಗಿದೆ. ನಗರ-ಕೊಲ್ಲೂರು ರಸ್ತೆಯ ಯೆಬಗೋಡಿನಿಂದ ಜಾಮಿಜಡ್ಡುಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕುಸಿದು ಹೋಗಿದೆ.
5 ಎಕರೆ ಅಡಕೆ ತೋಟಕ್ಕೆ ನೀರು ನುಗ್ಗಿದ ಕಾರಣ ಅಡಕೆಗೆ ಕೊಳೆರೋಗ ಭೀತಿ ಜಮೀನು ಮಾಲೀಕರಲ್ಲಿ ಉಂಟಾಗಿದೆ. ಹಳ್ಳ ಸಂಪೂರ್ಣ ಮುಚ್ಚಿ ಹೋಗಿರುವ ಕಾರಣ ಮಣ್ಣು ತೆಗೆದು ಹಳ್ಳವನ್ನು ಮುಕ್ತಗೊಳಿಸುವ ಕೆಲಸ ಸಾಗಿದೆ.
3 ವರ್ಷದಿಂದ ಕುಸಿತ: ಕಳೆದ ಮೂರು ವರ್ಷದಿಂದ ಧರೆ ಸ್ವಲ್ಪ ಸ್ವಲ್ಪವಾಗಿ ಕುಸಿಯುತ್ತ ಬಂದಿದ್ದು, ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸದ ಹಿನ್ನಲೆಯಲ್ಲಿ ಈ ದುರಂತ ಸಂಭವಿಸಿದೆ. ಈ ಬಗ್ಗೆ ಸಚಿವರು ಮತ್ತು ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಾರಾಯಣ ಉಪಾಧ್ಯಾಯ ಮನವಿ ಮಾಡಿದ್ದಾರೆ.