ಶಿವಮೊಗ್ಗ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಗರ ಶಾಖೆಯ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಡಿಸಿಬಿಐ ಪೊಲೀಸರು ಸೋಮವಾರ ಇನ್ನೂ ಮೂವರನ್ನು ಬಂಧಿಸಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ 11ಕ್ಕೆ ಏರಿದೆ.
ಈಗಾಗಲೇ ಬಂಧನದಲ್ಲಿರುವ ನಗರ ಶಾಖೆ ಮ್ಯಾನೇಜರ್ ಶೋಭಾ ಅವರ ಪತಿ ಜಗದೀಶ್, ಸಹೋದರ ಚಂದ್ರು, ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಾಹನ ಚಾಲಕ ಶಿವು ಬಂಧಿತರು. ಪೊಲೀಸರು ಇನ್ನೂ ಹಲವರ ವಿಚಾರಣೆ ನಡೆಸಿದ್ದು, ಬಂಧಿತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.
ಮ್ಯಾನೇಜರ್ ಶೋಭಾ ಅವರು ಸಂಬಂಧಿಗಳ ಹೆಸರಲ್ಲಿ ಬೇನಾಮಿ ಖಾತೆ ತೆರೆದಿದ್ದರು. ಪತಿ ಜಗದೀಶ್ ಅಕ್ರಮ ಹಣ ಬಳಸಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಸಹೋದರ ಚಂದ್ರು ಅವರು ಶೋಭಾ ಪರವಾಗಿ ಆನ್ ಲೈನ್ ಗೋಲ್ಡ್ ಟ್ರೇಡಿಂಗ್ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಅಲ್ಲದೇ ಇವರಿಬ್ಬರೂ ಅವ್ಯವಹಾರಕ್ಕೆ ಇವರು ಸಹಕರಿಸಿದ್ದಾರೆ ಎಂಬುದು ಬಂಧನಕ್ಕೆ ಕಾರಣವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ವಾಹನ ಚಾಲಕ ಶಿವು ಅವರ ಹೆಸರಿನಲ್ಲಿ ಇದೇ ಬ್ಯಾಂಕಿನಲ್ಲಿ ನಕಲಿ ಖಾತೆ ಸೃಷ್ಟಿಸಲಾಗಿತ್ತು. ಇವರೂ ಸಹ ಬಂಗಾರ ಅಡಮಾನ ಸಾಲ ಪಡೆದಿದ್ದರು. ಎಸ್ಪಿ ಕೌಶಲೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಡಿಸಿಬಿಐ ಇನ್ಸ್ಪೆಕ್ಟರ್ ಜೈರಾಜ್ ಅವರು ಈ ಮೂವರನ್ನು ಬಂಧಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿ ಹೆಚ್ಚಿನ ತನಿಖೆಗೆಂದು ಮರು ವಶ ಪಡೆದಿದ್ದಾರೆ.