ತ್ಯಾಗರ್ತಿ: ಗೌತಮಪುರ ಸಮೀಪದ ಅಂಬ್ಲಿಗೊಳ ಜಲಾಶಯ ಭರ್ತಿಯಾಗಿದ್ದು ಈ ಭಾಗದ ರೈತರಲ್ಲಿ ಹರ್ಷ ಮೂಡಿಸಿದೆ. ಕಳೆದ 10-12 ದಿನಗಳಿಂದ ಸಾಕಷ್ಟು ಮಳೆ ಬಿದ್ದ ಕಾರಣ ಭಾನುವಾರ ತಡರಾತ್ರಿಯಿಂದ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರು ಕೋಡಿ ಮೂಲಕ ಹೊರಹೋಗುತ್ತಿದೆ.
ಸಾಗರ ತಾಲೂಕಿನ ಗಡಿಯಲ್ಲಿರುವ ಈ ಜಲಾಶಯ ಗೌತಮಪುರ, ಭೈರಾಪುರ, ಚೆನ್ನಾಪುರ ಹಾಗೂ ಡ್ಯಾಂ ಕೆಳಭಾಗದ ಸಾಲೂರು ವರೆಗಿನ ರೈತರ ಹೊಲ ಗದ್ದೆಗಳಿಗೆ ಸಾಕಷ್ಟು ನೀರನ್ನು ಒದಗಿಸುವ ನೀರಾವರಿ ಅಣೆಕಟ್ಟು ಇದಾಗಿದೆ. ಆನಂದಪುರಂ- ಶಿಕಾರಿಪುರ ರಾಜ್ಯಹೆದ್ದಾರಿಯಲ್ಲಿ 18 ಕಿಮೀ ದೂರದಲ್ಲಿರುವ ಈ ಡ್ಯಾಂಅನ್ನು ನೀರಾವರಿಗಾಗಿ ನಿರ್ಮಿಸಲಾಗಿದೆ. ಡ್ಯಾಂನಿಂದ ಗೌತಮಪುರದವರೆಗೆ ಹಿನ್ನೀರು ಸಮುದ್ರದಂತೆ ತುಂಬಿಕೊಂಡಿದ್ದು ಮನ ಮೋಹಕ ದೃಶ್ಯ ಸೃಷ್ಠಿಸಿದೆ.
ಡ್ಯಾಂನಿಂದ ಹೆಚ್ಚುವರಿ ನೀರು ಹೊರ ಹೋಗುವ ಕೋಡಿ ಸಹ ಜಲಪಾತದಂತೆ ಕಂಗೊಳಿಸುತ್ತಿದ್ದು, ಹಲವು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಸಂಭ್ರಮಿಸಲು ಆರಂಭಿಸಿದ್ದಾರೆ. ಮಂಗಳವಾರ ರಂಜಾನ್ ಹಬ್ಬದ ಪ್ರಯುಕ್ತ ರಜೆ ಇರುವ ಕಾರಣ ಹಲವು ಪ್ರವಾಸಿಗರು ಕುಟುಂಬ ಸಹಿತ ಇಲ್ಲಿಗೆ ಆಗಮಿಸಿ ಡ್ಯಾಂ ಮೇಲೆ ಓಡಾಡಿ, ಕೋಡಿ ನೀರಿನ ಪ್ರವಾಹ ವೀಕ್ಷಣೆ ಮಾಡುತ್ತಾ ಕಾಲ ಕಳೆದರು.