ಅಹವಾಲು ಸ್ವೀಕಾರ, ಅಲ್ಲೇ ಪರಿಹಾರ

Updated on: 

ಶಿವಮೊಗ್ಗ: ಬೆಳಗಿನಿಂದ ಸಂಜೆಯವರೆಗೆ - ಒಟ್ಟು 81 ಪ್ರಕರಣಗಳು.
ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ನಗರದ ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕರ ಕುಂದು ಕೊರತೆ ಸ್ವೀಕಾರದ ಹೈಲೈಟ್ ಇದು. ಬಹುತೇಕ ಪ್ರಕರಣಗಳಿಗೆ ಸ್ಥಳದಲ್ಲೇ ಪರಿಹಾರವನ್ನೂ ಒದಗಿಸಿದರು.
ಮಧ್ಯಾಹ್ನದ ಭೋಜನ ವಿರಾಮ ಹೊರತುಪಡಿಸಿ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಹವಾಲು ಆಲಿಸಿದರು. ಹಿಂದಿನ ದಿನದ ವರೆಗೆ ತಮ್ಮೆದುರು ಬಾಕಿ ಇದ್ದ ಜಿಲ್ಲೆಯ ಎಲ್ಲಾ ಪ್ರಕರಣಗಳಿಗೂ ಅವರು ಒಂದಲ್ಲಾ ಒಂದು ರೀತಿಯ ಪರಿಹಾರ ನೀಡಿದರು.
ಕೆಲವು ಪ್ರಕರಣಗಳನ್ನು ತನಿಖೆಗೆ ಒಪ್ಪಿಸಿದರೆ, ಇನ್ನೂ ಕೆಲವು ಪ್ರಕರಣಗಳಲ್ಲಿ ತಕ್ಷಣ ಉತ್ತರ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಆದರೆ ಆಡಳಿತಾತ್ಮಕ ವಿಷಯಗಳು, ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಪ್ರಕರಣಗಳನ್ನು ಅವರು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು.
ಲೋಕಾಯುಕ್ತ ರಿಜಿಸ್ಟ್ರಾರ್ ದೇಶಪಾಂಡೆ, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್, ಲೋಕಾಯುಕ್ತ ಡಿವೈಎಸ್ಪಿ ಶ್ರೀಧರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ನಿವಾಸಿಯೇ ಅಲ್ಲ ಎನ್ನುತ್ತಾರೆ: ಕಾರ್ಗಿಲ್ ಯೋಧರೊಬ್ಬರು ವಿಶಿಷ್ಠ ಅಹವಾಲನ್ನು ಲೋಕಾಯುಕ್ತರೆದುರು ಮಂಡಿಸಿದರು. ನಾನು 2006ರ ವರೆಗೂ ಸೇನೆಯಲ್ಲಿದ್ದು, ನಿವೃತ್ತಿಯ ನಂತರ ವಾಪಸು ಮಂಡಗದ್ದೆಗೆ ಬಂದೆ. ಅಷ್ಟರಲ್ಲಾಗಲೇ ನನ್ನ ಮನೆ ಜಾಗ ನೀರಾವರಿ ಇಲಾಖೆಯು ತುಂಗಾ ಮೇಲ್ದಂಡೆ ಯೋಜನೆಗೆಂದು ಸ್ವಾಧೀನ ಮಾಡಿಕೊಂಡಿತ್ತು. ಪರಿಹಾರ ಕೇಳಿದಾಗ ನೀವು ಮಂಡಗದ್ದೆಯಲ್ಲಿ ವಾಸವಾಗಿರಲಿಲ್ಲ, ಹಾಗಾಗಿ ನೀವು ಇಲ್ಲಿನ ನಿವಾಸಿ ಅಲ್ಲ ಎನ್ನುತ್ತಾರೆ. ಪರಿಹಾರ ಕೊಟ್ಟಿಲ್ಲ ಎಂದರು.
ಆಶ್ಚರ್ಯ ವ್ಯಕ್ತಪಡಿಸಿದ ಲೋಕಾಯುಕ್ತರು 3 ತಿಂಗಳಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.
ಮನೆ ಹಾನಿ, ಪರಿಹಾರವಿಲ್ಲ:  ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ಮಾಣ ಮಾಡುವಾಗ ಸ್ಫೋಟಕ ಬಳಸಿದ್ದರಿಂದ ಮನೆಗಳಿಗೆ ಹಾನಿಯಾಗಿದೆ. ಈ ಬಗ್ಗೆ ದೂರು ನೀಡಿದಾಗ ನೀರಾವರಿ ಇಲಾಖೆ ಅಧಿಕಾರಿಗಳು ಮನೆಗಳಿಗೆ ಹಾನಿಯಾಗಿಲ್ಲ ಎಂದು ವರದಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ ಎಂದು ಮಹಿಳೆಯರಿಬ್ಬರು ದೂರಿದರು. ಅಗ ನ್ಯಾಯಮೂರ್ತಿ ಭಾಸ್ಕರ ರಾವ್ ಅವರು ಈ ಬಗ್ಗೆ ಖುದ್ದಾಗಿ ಪರಿಶೀಲಿಸುವಂತೆ ಹೆಚ್ಚುವರಿ ಎಸ್ಪಿಯವರಿಗೆ ಸೂಚಿಸಿದರು. ಈ ಮೊದಲು ನೀಡಿದ್ದ ವರದಿ ತಪ್ಪಾಗಿದ್ದರೆ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಕೆಲಸಕ್ಕೆ ಕೌಶಲ್ಯ ಬೇಡವೇ?:  ಭದ್ರಾವತಿಯ ಎಂಪಿಎಂ ಕಾರ್ಖಾನೆಯಲ್ಲಿ ಎಂಜಿನಿಯರ್ ಹುದ್ದೆಗೆ ಬಿ.ಕಾಂ. ಪದವೀಧರರೊಬ್ಬರನ್ನು ನೇಮಿಸಿರುವುದಕ್ಕೆ ತರಾಟೆಗೆ ತೆಗೆದುಕೊಂಡ ಲೋಕಾಯುಕ್ತರು, ಯಾವ ನಿಯಮದ ಆಧಾರದ ಮೇಲೆ ನೇಮಿಸಿಕೊಂಡಿದ್ದೀರಿ ಎಂದು ಪ್ರಶ್ನಿಸಿದರು. ಅನುಭವ, ಶಿಫಾರಸಿನ ಮೇಲೆ ನೇಮಕವಾಗಿದೆ ಎಂದು ಅಧಿಕಾರಿಗಳು ಹೇಳಿದಾಗ, ತಾಂತ್ರಿಕ ಪರಿಣಿತಿ ಇಲ್ಲದವರನ್ನು ಹೇಗೆ ನೇಮಿಸುತ್ತೀರಿ? ಆರ್ಟ್ಸ್ ಓದಿದವರನ್ನು ವೈದ್ಯರನ್ನಾಗಿ ನೇಮಿಸಲು ಸಾಧ್ಯವೇ? ಈ ಬಗ್ಗೆ ತನಿಖೆ ನಡೆಸಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ವಿಶೇಷ ಪ್ರಕರಣಗಳು
- ಸೋಗಾನೆ ವಿಮಾನ ನಿಲ್ದಾಣಕ್ಕೆ ಜಾಗ ಸ್ವಾಧೀನ ಪಡೆದಾಗ ನನಗೆ ಬರಬೇಕಿದ್ದ ಪರಿಹಾರ ಹಣವನ್ನು ಬೇರೊಬ್ಬರಿಗೆ ನೀಡಲಾಗಿದೆ ಎಂದು ಮಹಿಳೆಯೊಬ್ಬರು ಕೇಳಿದಾಗ ಈ ಬಗ್ಗೆ 4 ತಿಂಗಳಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
- ಶಿವಮೊಗ್ಗ ಎಟಿಎನ್‌ಸಿ ಕಾಲೇಜಿನಲ್ಲಿ ಹೆಚ್ಚು ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಎನ್‌ಎಸ್‌ಯುಐ ಚೇತನ್ ದೂರಿದಾಗ ತನಿಖೆ ನಡೆಸುವಂತೆ ಪದವಿ ಶಿಕ್ಷಣ ಇಲಾಖೆಗೆ ಸೂಚಿಸಿದರು.
- ಬೆಳಗಾವಿ ಹಾಗೂ ಶಿವಮೊಗ್ಗ ಕೋಟೆ ಪೊಲೀಸರೆಂದು ಹೇಳಿದ ಇಬ್ಬರು ನನ್ನ ಅಂಗಡಿಯಿಂದ 52 ಗ್ರಾಂ ಬಂಗಾರ ತೆಗೆದುಕೊಂಡು ಹೋಗಿದ್ದಾರೆ. ಏನೆಂದು ಗೊತ್ತಾಗಿಲ್ಲ ಎಂದು ನಿವಾಸಿಯೊಬ್ಬರು ದೂರಿದಾಗ, ಗಂಭೀರ ಪರಿಶೀಲನೆಗೆ ಸೂಚಿಸಿದರು.
- ಮಹಿಳೆಯೊಬ್ಬರು ತಮ್ಮ ಮನೆಯ ಪಕ್ಕದ ಮನೆಯವರು ನಿಯಮದಂತೆ ಮನೆ ಕಟ್ಟಿಲ್ಲ. ಅವರ ಮನೆ ಕಿಟಕಿಯಿಂದ ಸಿಗರೇಟು ವಾಸನೆ ಬರುತ್ತಿರುತ್ತದೆ. ಕಿಟಕಿ ಬಂದ್ ಮಾಡಿಸಿ ಎಂದಾಗ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೂ ಸೂಚಿಸಲಾಯಿತು.
- ಕೋಟೆಗಂಗೂರಿನಲ್ಲಿ ಆಯುರ್ವೇದ ಕಾಲೇಜಿಗೆಂದು ಮೂರುವರೆ ಎಕರೆ ಜಾಗ ವಶಕ್ಕೆ ಪಡೆದಿದ್ದು, ಇದ್ದ ಮನೆಯನ್ನೂ ಕೆಡವಲಾಗಿದೆ. ನನಗೆ ಬೇರೆ ಆಧಾರವಿಲ್ಲ, ಏನು ಮಾಡಲಿ ಎಂದು ಮಹಿಳೆಯೊಬ್ಬರು ಕಣ್ಣೀರಿಟ್ಟರು.
- ನನ್ನ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು ಕಳೆದು ಹೋಗಿವೆ. ಕೇಳಿದರೆ ಈಗ ಬನ್ನಿ, ಆಗ ಬನ್ನಿ ಎಂದು ಓಡಾಡಿಸುತ್ತಿದ್ದಾರೆ ಎಂದು ಭದ್ರಾವತಿಯ ನಿವಾಸಿಯೊಬ್ಬರು ನಗರಸಭೆ ವಿರುದ್ಧ ದೂರಿದರು.
- ಅಂತ್ಯೋದಯ ಕಾರ್ಡ್ ಕೊಡಿಸಿ, ಆಶ್ರಯ ಮನೆ ಕೊಡಿಸಿ, ವೃದ್ಧಾಪ್ಯ ವೇತನ ನೀಡಿ, ಊರಿನ ಸ್ಮಶಾನಕ್ಕೆ ಜಾಗ ಕೊಡಿ, ಖಾಸಗಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ವಹಿಸಿ ಎಂದೂ ಸಹ ಹಲವರು ಲೋಕಾಯುಕ್ತರಲ್ಲಿ ಅಹವಾಲು ಮಂಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com