ಕನ್ನಡಪ್ರಭ ವಾರ್ತೆ, ಶಿವಮೊಗ್ಗ, ಜೂ.23
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಬಲಿ ತೆಗೆದುಕೊಂಡಿದೆ ಎಂಬ ಕಾರಣಕ್ಕೆ ಸೆರೆ ಹಿಡಿದು ಪಳಗಿಸುತ್ತಿದ್ದ ಕಾಡಾನೆ ಸೋಮವಾರ ಸಕ್ರೆಬೈಲು ಆನೆ ಬಿಡಾರದಲ್ಲಿ ಮೃತಪಟ್ಟಿದೆ.
ಸುಮಾರು 45ರ ಹರೆಯದ ಈ ಆನೆಯನ್ನು ಜೂ.7ರಂದು ಸಕ್ರೆಬೈಲಿಗೆ ತರಲಾಗಿತ್ತು. ದಾಂಡೇಲಿ ಸಮೀಪದ ಜೋಯಿಡಾ ಬಳಿ ಕಾರ್ಯಾಚರಣೆ ನಡೆಸಿ ಆ ಆನೆಯನ್ನು ಸೆರೆ ಹಿಡಿಯಲಾಗಿತ್ತು. ಕಾರ್ಯಾಚರಣೆಗೆ ಬಳಸಲಾಗಿದ್ದ ಆನೆಗಳಿಂದ ಕಾಡಾನೆ ತಿವಿತಕ್ಕೊಳಗಾಗಿ ಕಿವಿ ಭಾಗದಲ್ಲಿ ಗಾಯಗೊಂಡಿತ್ತು. ಕ್ರಾಲ್ (ಆನೆ ಪಳಗಿಸುವ ಸ್ಥಳ)ನೊಳಗಿದ್ದ ಗಾಯಾಳು ಆನೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿತೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಾಹ್ನ ಕ್ರಾಲ್ನಲ್ಲಿದ್ದ ಆನೆಯ ಮೃತದೇಹವನ್ನು ಜೆಸಿಬಿ ಬಳಸಿ ಹೊರಗೆಳೆಯಲಾಯಿತು. ನಂತರ ಮರಣೋತ್ತರ ಪರೀಕ್ಷೆ ನಡೆಸಿ ತರುವಾಯ ಆಗ್ನಿಸ್ಪರ್ಶ ಮಾಡಲಾಯಿತು.ಆನೆ ಮೃತಪಟ್ಟ ಸುದ್ದಿ ತಿಳಿದು ಸುತ್ತಮುತ್ತಲ ಗ್ರಾಮಗಳ ನೂರಾರು ಜನ ಅಲ್ಲಿಗಾಗಮಿಸಿ ವೀಕ್ಷಿಸಿದರು.