ಹರಪನಹಳ್ಳಿ: ವರುಣನ ಕೃಪೆಗಾಗಿ ಪಟ್ಟಣದ ವಾಲ್ಮೀಕಿ ನಗರದಲ್ಲಿ ಗುರುವಾರ ಕತ್ತೆಗಳ ಮದುವೆ ಮಾಡಿ ಮೆರವಣಿಗೆ ನಡೆಸಲಾಯಿತು.
ದುರುಗಮ್ಮದೇವಿ ದೇವಸ್ಥಾನದ ಬಳಿ ಕತ್ತೆಗಳಿಗೆ ಸ್ನಾನ ಮಾಡಿಸಿ, ನಂತರ ಹೊಸ ಬಟ್ಟೆಗಳನ್ನು ಹೊದಿಸಲಾಗಿತ್ತು. 2 ಕತ್ತೆಗಳಿಗೆ ಹೂವಿನ ಹಾರ ಹಾಕಿ ನಂತರ ಕಾಲುಂಗರ, ತಾಳಿ ಕಟ್ಟಲಾಯಿತು. ಜನರು ಅಕ್ಷತೆ ಹಾಕಿ ಮದುವೆ ಸಂಪ್ರದಾಯ ಮೆರೆದರು.
ವಿವಿಧ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕತ್ತೆಗಳ ಮೆರವಣಿಗೆ ನಡೆಸಲಾಯಿತು. ವಾಲ್ಮೀಕಿ ನಗರದ ಮುಖಂಡರಾದ ಸಣ್ಣ ಹಾಲಪ್ಪ, ಅಂಜಿನಪ್ಪ, ಬಿದ್ದ ಹನುಮಪ್ಪ, ಹಾಲಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.