ಸಾಗರ: ಸಾಗರದಿಂದ ದೀವಗದ್ದೆಗೆ ತೆರಳುವ ಸಂಪರ್ಕ ರಸ್ತೆಯನ್ನು ಸ್ಥಳಿಯ ಯುವಕರೇ ದುರಸ್ತಿಗೊಳಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಸಾಗರದಿಂದ ದೀವಗದ್ದೆಗೆ ತೆರಳುವ ಸಂಪರ್ಕ ರಸ್ತೆ ಸಂಪೂರ್ಣ ಶಿಥಿಲಗೊಂಡು ವರ್ಷಗಳೇ ಕಳೆದಿತ್ತು. ಈ ಬಗ್ಗೆ ಗ್ರಾಮಸ್ಥರು ಸಂಬಂಧಿಸಿದವರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಇದನ್ನು ಮನಗಂಡ ಸ್ಥಳೀಯ ನವಚೇತನ ವೇದಿಕೆಯ ಸ್ಥಾಪಕ ಪ್ರಶಾಂತ್ ಅವರು ವೇದಿಕೆಯ ಸಂಚಾಲಕ ಲಿಂಗರಾಜು ಹಾಗೂ ಸದಸ್ಯ ಹರೀಶ್, ಹಾಲಪ್ಪ, ಕೃಷ್ಣಪ್ಪ, ಸುರೇಶ್, ಕಮಲಾಕರ್, ರಾಘವೇಂದ್ರ, ಬಸವರಾಜ್ ಅವರೊಂದಿಗೆ ಸಮಾಲೋಚನೆ ನಡೆಸಿ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡು ತಮ್ಮ ಕಾರ್ಯದಲ್ಲಿ ಯಶಸ್ಸು ಸಾಧಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಕುರಿತು ಪ್ರಶಾಂತ್ ಪ್ರತಿಕ್ರಿಯೆ ನೀಡಿ, ನವಚೇತನ ವೇದಿಕೆ ಈಗಾಗಲೇ ಸಾಗರ, ಹೊಸನಗರದ ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯುವಕರನ್ನು ಒಗ್ಗೂಡಿಸಿ ಸಮಾಜದ ವಿವಿಧ ಸ್ತರಗಳಲ್ಲಿರುವ ಸಮಸ್ಯೆ ಗುರುತಿಸಿ ನಮ್ಮಿಂದಾದ ಸಹಾಯವನ್ನು ಮಾಡುತ್ತಿದ್ದೇವೆ ಎಂದರು.