ಶಿವಮೊಗ್ಗ: ಎದುರಿಗೆ ಬಂದ ಬೈಕ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಸ್ಕಾರ್ಪಿಯೋ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕೆರೆಗೆ ಉರುಳಿದ ಘಟನೆ ಶುಕ್ರವಾರ ಮುಂಜಾನೆ ಪುರಲೆ ಗ್ರಾಮದಲ್ಲಿ ನಡೆದಿದೆ. ಅಚ್ಚರಿ ಸಂಗತಿ ಎಂದರೆ ಕಾರಿನೊಳಗಿದ್ದ ಎಲ್ಲಾ ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಕೆರೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರಿರಲಿಲ್ಲ. ಹೀಗಾಗಿ ಹೆಚ್ಚಿನ ಅಪಾಯ ಸಂಭವಿಸುವ ಮುನ್ನವೇ ಕಾರಿನೊಳಗಿದ್ದವರು ಸುರಕ್ಷಿತವಾಗಿ ಹೊರಬರುವಲ್ಲಿ ಸಫಲರಾದರು.
ಕಾರಿನೊಳಗೆ ಬಾಣಂತಿ, ಒಂದೂವರೆ ತಿಂಗಳ ಹಸುಗೂಸು ಸೇರಿದಂತೆ ಒಂದೇ ಕುಟುಂಬದ ಏಳು ಜನರು ಇದ್ದರು. ವಿಷಯ ತಿಳಿಯುತ್ತಿದ್ದಂತೆ ಗ್ರಾಮಾಂತರ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ಉಮೇಶ್ ಮತ್ತವರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆರೆಯಲ್ಲಿ ಬಿದ್ದಿದ್ದ ಕಾರನ್ನು ಕ್ರೈನ್ ಮೂಲಕ ಹೊರ ತೆಗೆಯಲಾಯಿತು.
ಚಿತ್ರದುರ್ಗ ಜಿಲ್ಲೆ ಜೆಡಿಎಸ್ ಮುಖಂಡ ಮಲ್ಲೇಶ ನಾಯ್ಕ ತಮ್ಮ ಕುಟುಂಬದ ಇತರೆ ಸದಸ್ಯರೊಂದಿಗೆ ಸ್ಕಾರ್ಪಿಯೋ ಕಾರಿನಲ್ಲಿ ಶಿವಮೊಗ್ಗ ಮೂಲಕ ಎನ್ಆರ್ಪುರಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಮಲ್ಲೇಶ್ ನಾಯ್ಕ ಅವರೇ ಕಾರು ಚಾಲನೆ ಮಾಡುತ್ತಿದ್ದರು. ಪುರಲೆ ಕೆರೆ ತಿರುವಿನಲ್ಲಿ ಬರುತ್ತಿದ್ದಾಗ ಎದುರಿನಿಂದ ಬೈಕ್ ಸವಾರನೊಬ್ಬ ಏಕಾಏಕಿ ನುಗ್ಗಿ ಬಂದಿದ್ದು, ಬೈಕ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕೆರೆಗೆ ನುಗ್ಗಿದೆ.