ಚಿಕ್ಕನಾಯಕನಹಳ್ಳಿ: ಪಕ್ಷದ ಬೆನ್ನಿಗೆ ಚೂರಿ ಹಾಕಿದ ಶೋಭಾ ಕರಂದ್ಲಾಜೆಯವರು, ಸಿದ್ಧಾಂತದಲ್ಲಿ ನಂಬಿಕೆಯಿಟ್ಟು, ತಮ್ಮನ್ನು ಆಯ್ಕೆಮಾಡಿದ ಮತದಾರರಿಗೆ ಪ್ರಾಮಾಣಿಕ ಸೇವೆ ಮತ್ತು ಕ್ಷೇತ್ರದ ಅಭಿವೃದ್ಧಿ ಮಾಡುತ್ತಿರುವ ನಿಷ್ಠಾವಂತ ಶಾಸಕ ಬಿ.ಸಿ.ನಾಗೇಶ್ ಬಗ್ಗೆ ಮಾತನಾಡುವ ನೈತಿಕತೆ ಹೊಂದಿಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್ ನುಡಿದರು. ಅವರು ತಾಲೂಕಿನಲ್ಲಿ ಮನೆಮನೆಗೆ ಬಿಜೆಪಿ ಜನಜಾಗರಣ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅಧಿಕಾರದಲ್ಲಿರುವವರಗೆ ಬಿಜೆಪಿ ಬಗ್ಗೆ ಟೀಕೆ ಮಾಡದ ಅವರು,ರಾಜಿನಾಮೆ ಕೊಟ್ಟನಂತರ ಟೀಕೆಮಾಡುವುದು ಸಭ್ಯತೆಯ ಲಕ್ಷಣವಲ್ಲ. ಬೆನ್ನಿಗೆ ಚೂರಿ ಹಾಕಿರುವುದು ಶೋಭಾ ಹೊರತು ನಾಗೇಶ್ ಅಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು. ಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಎಸ್. ಕಿರಣ್ಕುಮಾರ್, ಪಕ್ಷದ ಪ್ರಧಾನಕಾರ್ಯದರ್ಶಿ ಕೆ.ವಿ.ಕವಿತಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ, ತಾಪಂ ಅಧ್ಯಕ್ಷ ಎಂ.ಎಂ.ಜಗದೀಶ್ ಮುಂತಾದವರಿದ್ದರು.