ಹುಳಿಯಾರು: ಬ್ರಾಹ್ಮಣ ಬೀದಿಯಲ್ಲಿನ ನಿವೃತ್ತ ಶಿಕ್ಷಕ ಗುಂಡಪ್ಪ ಎಂಬುವರ ಮನೆ ಬಾಗಿಲ ಬೀಗ ಮುರಿದು ಕನ್ನ ಹಾಕಿರುವ ಘಟನೆ ಬುಧವಾರ ರಾತ್ರಿ ನಡೆದಿದ್ದು, ಗುರುವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಗುಂಡಪ್ಪನ ಕುಟುಂಬದವರು ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿ ನಾಲ್ಕು ದಿನಗಳಾಗಿದ್ದವು. ಮನೆಯ ಬಾಗಿಲಿಗೆ ಹಾಕಿದ್ದ ಬೀಗ ಮುರಿದಿರುವುದನ್ನು ಕಂಡ ಸ್ಥಳೀಯರು ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿ, ಬೆರಳಚ್ಚು ದಳ ಹಾಗೂ ಶ್ವಾನದಳವನ್ನು ಕರೆಸಿ ಮನೆಯನ್ನು ಪರಿಶೀಲಿಸಿದರು.
ಪೊಲೀಸರು ಕಳ್ಳರ ಪತ್ತೆಗೆ ಕ್ರಮ ಜರುಗಿಸಿದ್ದಾರೆ. ಮನೆಯ ಬೀರಿನಲ್ಲಿದ್ದ ಬೆಳ್ಳಿಯ ಪೂಜಾ ಸಾಮಗ್ರಿಗಳು ಸೇರಿದಂತೆ ಸುಮಾರು 2 ಕೆ.ಜಿ. ಬೆಳ್ಳಿ ಪದಾರ್ಥ ಹಾಗೂ 8 ಗ್ರಾಂ. ಬಂಗಾರದ ಆಭರಣದ ಪದಾರ್ಥಗಳು ಕಳ್ಳತನವಾಗಿದ್ದು, ಪ್ರಕರಣ ದಾಖಲಾಗಿದೆ.