ತುಮಕೂರು: ಜನಪರ ಬಜೆಟ್ ಮಂಡಿಸುವುದಾಗಿ ಹೇಳುತ್ತಲೇ ಅದೇ ದಿನ ಭಾರೀ ಪ್ರಮಾಣದಲ್ಲಿ ಹಾಲಿನ ಮಾರಾಟ ದರ ಏರಿಕೆ ಮಾಡಿರುವ ರಾಜ್ಯ ಬಿಜೆಪಿ ಸರ್ಕಾರದ ಕ್ರಮವನ್ನು ಎಸ್ಯುಸಿಐ(ಸಿ)ನಗರ ಕಾರ್ಯದರ್ಶಿ ಎಸ್.ಎನ್. ಸ್ವಾಮಿ ಖಂಡಿಸಿದ್ದಾರೆ. ರಾಜ್ಯ ಸರ್ಕಾರ ಹಾಲಿನ ಮಾರಾಟದ ಬೆಲೆಯಲ್ಲಿ ಏಕಾಏಕಿ 4 ರು. ಏರಿಕೆ ಮಾಡಿರುವುದು ಸಮರ್ಥನೀಯವಲ್ಲ. ರೋಗಿಗಳು, ವೃದ್ಧರು ಮತ್ತು ಎಳೆಯ ಮಕ್ಕಳ ಪಾಲನೆ-ಪೋಷಣೆಗೆ ಹೆಚ್ಚು ಬಳಕೆಯಾಗುತ್ತಿದ್ದ ಜೀವನಾವಶ್ಯಕ ಆಹಾರದ ಬೆಲೆಯನ್ನು ಈ ಪರಿಯಾಗಿ ಏರಿಸಿರುವ ಬಿಜೆಪಿ ಸರ್ಕಾರವು ಇದಕ್ಕಾಗಿ ಹಾಲು ಉತ್ಪಾದಿಸುತ್ತಿರುವ ರೈತರನ್ನು ಬಳಸಿಕೊಂಡಿರುವುದೂ ಅತ್ಯಂತ ನಾಚಿಕೆಗೇಡಿನದಾಗಿದೆ ಎಂದಿದ್ದಾರೆ. ಹಾಲು ಉತ್ಪಾದಿಸುತ್ತಿರುವ ರೈತರಿಗೆ ಸರ್ಕಾರದಿಂದ ನೆರವು ನೀಡುವುದಕ್ಕೆ ರಾಜ್ಯದ ಜನರು ತಕರಾರೇನೂ ತೆಗೆಯದಿದ್ಧರೂ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುವ ಉದ್ದೇಶದಿಂದಲೇ ರೈತರನ್ನು ಇಲ್ಲಿ ಎಳೆದು ತರಲಾಗಿದೆ ಎಂದು ತಿಳಿದುಕೊಳ್ಳಲು ಹೆಚ್ಚಿನ ಜ್ಞಾನವೇನೂ ಬೇಕಾಗಿಲ್ಲ ಎಂದಿದ್ದಾರೆ. ರಾಜ್ಯದ ಇತರ ರೈತರಂತೆ ಹಾಲು ಉತ್ಪಾದಿಸುವ ರೈತರೂ ಕಷ್ಟದಲ್ಲಿರುವುದು ನಿಜ. ಅಂತಹ ಕಷ್ಟದಲ್ಲಿರುವ ರೈತರಿಗೆ ಸರ್ಕಾರದ ನೆರವಿನ ಅಗತ್ಯವೂ ಇದೆ. ಆದರೆ ಅಂತಹ ರೈತರಿಗೆ ಸರ್ಕಾರವು ಸಬ್ಸಿಡಿಯನ್ನು ನೀಡಿ ಉತ್ತೇಜಿಸಬೇಕಾಗುತ್ತದೆ. ಅದನ್ನು ಬಿಟ್ಟು ಸರ್ಕಾರ ಆ ಹೊರೆಯನ್ನು ನೇರವಾಗಿ ಹಾಲು ಬಳಸುವ ಗ್ರಾಹಕರ ಹೆಗಲಿಗೇರಿಸುತ್ತಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ. ಹಾಲು ಉತ್ಪಾದಿಸುವ ರೈತರೂ ಸಹ ಸರ್ಕಾರದ ಈ ತಂತ್ರಗಾರಿಕೆಯನ್ನು ಶಾಂತಚಿತ್ತದಿಂದ ಪರಿಶೀಲಿಸಿ, ಸರ್ಕಾರದಿಂದಲೇ ತಮಗೆ ಸಬ್ಸಿಡಿ ನೀಡಬೇಕೆಂದು ಒತ್ತಾಯಿಸಬೇಕೆಂದು ಮತ್ತು ಅದಕ್ಕೆ ರಾಜ್ಯದ ಜನಸಾಮಾನ್ಯರು ಹಾಲು ಉತ್ಪಾದಿಸುವ ರೈತರ ಬೆಂಬಲಕ್ಕಿರುತ್ತಾರೆ ಎಂದಿದ್ದಾರೆ.
ರಾಜೇಶ್ಗೆ ಸನ್ಮಾನ
ತುಮಕೂರು: 224 ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಂತ ಹೆಚ್ಚು ಕಾರ್ಯಚಟುವಟಿಕೆಗಳನ್ನು ಮಾಡಿದ ಹಿನ್ನೆಲೆಯಲ್ಲಿ ತುಮಕೂರಿನ ರಾಜೇಶ್ ದೊಡ್ಮನೆಯವರನ್ನು ಅತ್ಯುತ್ತಮ ವಿಧಾನಸಭಾ ಅಧ್ಯಕ್ಷ ಎಂದು ಸನ್ಮಾನಿಸಲಾಯಿತು. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಆಧಾರ್ ಕಾರ್ಡ್ ಅರಿವು ಕಾರ್ಯಕ್ರಮದಲ್ಲಿ ಇವರನ್ನು ಗೌರವಿಸಲಾಯಿತು.