ತುಮಕೂರು: ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ವರದಿಯಿಂದಾದರೂ ಸರಿ ಅಥವಾ ಯಾವ ವರದಿಯಿಂದಾದರೂ ಸರಿ ಬಯಲುಸೀಮೆಗೆ ಕುಡಿಯುವ ನೀರು ಕೊಡಲೇಬೇಕು ಅನ್ನೋದು ತಮ್ಮ ಅಭಿಮತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಪ್ರತಿಪಾದಿಸಿದರು.
ಅವರು ತುಮಕೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಬಯಲು ಸೀಮೆಗೆ ನೀರು ತರುವಲ್ಲಿ ತಮ್ಮದೂ ಒಂದು ಚಿಂತನೆ ನಡೆದಿದೆ ಎಂದರು.
9 ಜಿಲ್ಲೆಗಳಿಗೆ ನೀರೊದಗಿಸುವ ವಾಟರ್ಗ್ರಿಡ್ ಕೆನಾಲ್ ಯೋಜನೆಗೆ ತಮ್ಮ ನಿಲುವೇನು, ಬೆಂಬಲವಿದೆಯೇ ಎಂಬ ಪ್ರಶ್ನೆಗೆ, ಎಲ್ಲಿದೆ ಹೋರಾಟ, ಯಾರ ಹೋರಾಟ ಎಂದು ಮರುಪ್ರಶ್ನಿಸಿದರು.
ಉಪ್ಪು-ಕಾರ ಹಾಕಿ ನೆಕ್ಕುತ್ತೀರಾ: ಬಯಲುಸೀಮೆಗೆ ನೀರೊದಗಿಸುವ ಯೋಜನೆಗೆ ರಾಜ್ಯ ಬಜೆಟ್ನಲ್ಲಿ ವಾಟರ್ಗ್ರಿಡ್ ಅಥವಾ ಪರಮಶಿವಯ್ಯ ವರದಿಗೆ ಅನುಮೋದನೆಯಾದರೆ ಸಾಲದು. ಅನುಮೋದನೆಯಿಂದ ನೀರು ಬರುವುದಿಲ್ಲ. ಅನುಮೋದನೆಯನ್ನು ಉಪ್ಪು-ಕಾರ ಹಾಕಿಕೊಂಡು ನೆಕ್ಕುತ್ತೀರಾ ಎಂದು ಖಾರವಾಗಿಯೇ ಪ್ರಶ್ನಿಸಿದರು. ಈಗಾಗಲೇ ಎತ್ತಿನಹೊಳೆ ಯೋಜನೆಗೆ ಕೇಂದ್ರದ ಸಿಇಸಿ ತಕರಾರು ತೆಗೆದಿದೆ ಎಂಬುದನ್ನು ಮರೆಯಬಾರದು ಎಂದರು.
ಒಕ್ಕೂಟ ವ್ಯವಸ್ಥೆಗೆ ಸವಾಲು ಹಾಕುವ ಚಿಂತನೆ: ಈಗಾಗಲೇ ಕಾವೇರಿ ಸೇರಿದಂತೆ ನೀರಾವರಿ, ಕುಡಿಯುವ ನೀರಿನ ಯೋಜನೆಗಳಿಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಪದೇ - ಪದೇ ಅನ್ಯಾಯ ಮಾಡುತ್ತಿದೆ. ಕೇಂದ್ರ ಸರ್ಕಾರ ಅಧಿಕಾರ ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿ ತಮಿಳುನಾಡನ್ನು ಓಲೈಸುತ್ತಿದೆ ಎಂದು ಕಿಡಿ ಕಾರಿದರು.
ಲೋಕಸಭೆಯಲ್ಲಿ ತಮಗೆ ಮಾತನಾಡಲು ಕೇವಲ 2 ನಿಮಿಷ ಮಾತ್ರ ಅವಕಾಶ ನೀಡಲಾಗುತ್ತಿದೆ. ಹೀಗಾಗಿ ತಾವು ಲೋಕಸಭೆಗೆ ಹೋಗುವುದನ್ನೇ ಬಿಟ್ಟಿದ್ದಾಗಿ ತಿಳಿಸಿದರು.
ತಮಿಳುನಾಡು ಮಾದರಿಯಂತೆ ಪ್ರಬಲ ಪ್ರಾದೇಶಿಕ ಪಕ್ಷಗಳ ಅಗತ್ಯವಿದೆ. ತಮಿಳುನಾಡು ಈ ಹಿಂದೆ ಒಕ್ಕೂಟ ವ್ಯವಸ್ಥೆಯಿಂದ ಹೊರ ಹೋಗುವ ಮಾತನಾಡಿತ್ತು ಎಂಬುದನ್ನು ಮರೆಯಬಾರದು ಎಂದರು. ತಾವು ಕೂಡ ಹಾಗೇ ಮಾಡುತ್ತೀರಾ ಎಂಬ ಪ್ರಶ್ನೆಗೆ, ಜನರ ಸಹಕಾರ ಬೇಕು. ತಮ್ಮ ಪಕ್ಷ ಅಧಿಕಾರಕ್ಕೆ ಬರಲಿ. ಒಕ್ಕೂಟ ವ್ಯವಸ್ಥೆಗೆ ಸವಾಲುಹಾಕುವ ಚಿಂತನೆ ಮಾಡುವುದನ್ನು ಪರಿಶೀಲಿಸೋಣ ಎಂದರು.