ಅಲೆಮಾರಿ ಸಮುದಾಯದ ಹಣ ಕಂಡವರ ಪಾಲು

Updated on: 

ತುಮಕೂರು: ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಲೆಮಾರಿಗಳ ಅಭಿವೃದ್ಧಿಗೆಂದು ಮೀಸಲಿರುವ ಹಣ ಬೇರೆಯವರ ಅಭಿವೃದ್ಧಿಗೆ ಬಳಕೆಯಾಗುತ್ತಿದೆ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾದ ಅಧ್ಯಕ್ಷ ಡಾ. ಬಾಲಗುರುಮೂರ್ತಿ ವಿಷಾದಿಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಪರ ವಿಧಾನಸಭೆ, ವಿಧಾನಪರಿಷತ್ ಹಾಗೂ ಸಂಸತ್ತಿನಲ್ಲಿ ಧ್ವನಿಯೆತ್ತಲು ಒಬ್ಬನೇ ಒಬ್ಬ ಜನಪ್ರತಿನಿಧಿಯಿಲ್ಲ. ಅಲೆಮಾರಿಗಳ ಹೆಸರಿನಲ್ಲಿ ನೆಲೆ ನಿಂತವರು ಸವಲತ್ತುಗಳನ್ನು ಪಡೆಯುತ್ತಿದ್ದಾರೆ ಎಂದರು.
ಅಲೆಮಾರಿಗಳು ಎಂದಿಗೂ ಸೋಮಾರಿಗಳಲ್ಲ. ಬದುಕಲು ನಿರಂತರವಾಗಿ ದುಡಿಯುತ್ತಲೇ ಬಂದಿದ್ದಾರೆ. ಆದರೆ ಇಂತಹ ಸಮುದಾಯವನ್ನು ಗುರುತಿಸುವ ಕೆಲಸ ಸ್ವಾತಂತ್ರ್ಯ ಬಂದು 65 ವರ್ಷ ಕಳೆದರೂ ನಡೆದಿಲ್ಲ. ಭಾರತದಲ್ಲಿ ಇರುವ 948  ಅಲೆಮಾರಿ ಸಮುದಾಯಗಳ ಒಟ್ಟು ಜನಸಂಖ್ಯೆ 14 ಕೋಟಿ. ಇದೆ. ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆಯನ್ನು ಹೊಂದಿರುವ ಅಲೆಮಾರಿ ಸಮುದಾಯ ಇಂದಿಗೂ ಮೂಲಭೂತ ಸವಲತ್ತುಗಳಿಂದ ವಂಚಿತವಾಗಿದೆ ಎಂದರು.
ಹೋರಾಟ ನಡೆಸಬೇಕಿದೆ: ಈ ಸವಲತ್ತುಗಳನ್ನೆಲ್ಲಾ ಪಡೆಯಬೇಕೆಂದರೆ ನಾವೆಲ್ಲರೂ ಒಗ್ಗೂಡಬೇಕಾಗಿದೆ ಎಂದರು.
ಅಂಬೇಡ್ಕರ್ ಅವರು ಶೋಷಿತ ಜನಾಂಗಗಳ ಅಭಿವೃದ್ಧಿಗಾಗಿ ಶಿಕ್ಷಣ ಸಂಘಟನೆ, ಹೋರಾಟ ಎಂಬ ಮೂರು ಅಸ್ತ್ರಗಳನ್ನು ಪರಿಚಯಿಸಿದ್ದರು. ನಾವೆಲ್ಲರೂ ವಿದ್ಯಾವಂತರಾಗುವ ಮೂಲಕ ಸಂಘಟಿತರಾಗಿ ನಮ್ಮ ಪಾಲಿನ ಸರಕಾರಿ ಸವಲತ್ತುಗಳನ್ನು ಪಡೆಯಲು ಹೋರಾಟ ನಡೆಸಬೇಕಾಗಿದೆ ಎಂದರು.
ಈ ನಿಟ್ಟಿನಲ್ಲಿ ಒಂದೊಂದು ಜಿಲ್ಲೆಯಲ್ಲಿ ಕನಿಷ್ಠ 10 ಜನ ಯುವಕರು ನನ್ನೊಂದಿಗೆ ಕೈಜೋಡಿಸಿದರೆ ಇಡೀ ಸಮಾಜದ ಹಣೆಬರಹವನ್ನು ಬದಲಾಯಿಸಬಹುದು. ಸಮಾಜದಲ್ಲಿ ಅತ್ಯಂತ ಕೆಳಸ್ತರದಲ್ಲಿರುವ ಅಲೆಮಾರಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ದಲಿತ ಸಮುದಾಯ ಅಲೆಮಾರಿ ಜನಾಂಗವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕಾಗಿದೆ ಎಂದರು.
ಪ್ರಬಲ ಶಕ್ತಿ: ರಾಜ್ಯದಾದ್ಯಂತ ಅಲೆಮಾರಿ ಸಮುದಾಯವನ್ನು ಒಂದುಗೂಡಿಸಿ ಪ್ರಬಲ ಶಕ್ತಿಯಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸಮಾವೇಶಗಳನ್ನು ನಡೆಸಿ ನಂತರ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಒಂದುಗೂಡಿ: ಚಿಂತಕ ಕೆ. ದೊರೈರಾಜು ಮಾತನಾಡಿ ಮನೆ, ಪಡಿತರ ಚೀಟಿ ಸೇರಿ ಯಾವುದೇ ಗುರುತು ಇಲ್ಲದೆ ಬೀದಿಯಲ್ಲಿ ಬಿದ್ದಿರುವ ಅಲೆಮಾರಿ ಜನಾಂಗದ ವಿವಿಧ ಪಂಗಡಗಳು ಆಳುವ ವರ್ಗಕ್ಕೆ ತಮ್ಮ ಇರುವಿಕೆ ತೋರಿಸುವ ನಿಟ್ಟಿನಲ್ಲಿ ಒಂದುಗೂಡಿ ಎದ್ದು ನಿಲ್ಲಬೇಕಿದೆ ಎಂದು ಸಲಹೆ ಮಾಡಿದರು.
ಕೇವಲ ಮತಬ್ಯಾಂಕುಗಳಾಗಿರುವ ಅಲೆಮಾರಿಗಳು ಮೊದಲು ನಮ್ಮ ಇರುವಿಕೆಯನ್ನು ತೋರಿಸಬೇಕಾಗಿದೆ.ಈ ನಿಟ್ಟಿನಲ್ಲಿ ಸಣ್ಣ ಸಣ್ಣ ಗುಂಪುಗಳಾಗಿರುವ ನಾವು ಅಲೆಮಾರಿ ಬುಡಕಟ್ಟು ಮಹಾಸಭಾದ ಹೆಸರಿನಲ್ಲಿ ಒಂದುಗೂಡಿ ತಮ್ಮ ಹಕ್ಕು ಪಡೆಯಲು ಮುನ್ನೆಡೆಯಬೇಕಾಗಿದೆ ಎಂದರು.
ಧ್ವನಿಯೇ ಇಲ್ಲದ ಅತ್ಯಂತ ಸಣ್ಣ ಸಂಖ್ಯೆಯಲ್ಲಿರುವ ಅಲೆಮಾರಿ ಸಮುದಾಯವನ್ನು ಒಂದು ವೇದಿಕೆಗೆ ಕರೆತರುವ ನಿಟ್ಟಿನಲ್ಲಿ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸಣ್ಣದಾಗಿ ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಸಂಘಟನೆ ಇಂದು ಜಿಲ್ಲಾ ಮಟ್ಟದವರೆಗೆ ತಲುಪಿದೆ. ಅಲೆಮಾರಿ ಸಮುದಾಯಕ್ಕೆ ಸೇರುವ ಶಿಳ್ಳೆಕ್ಯಾತ, ದೊಂಬಿದಾಸ, ಗೋಂದಳಿ, ಹೆಳವ, ದಕ್ಕಲಿಗ, ಹಕ್ಕಿಪಿಕ್ಕಿ, ಹಂದಿಜೋಗಿ, ಸಿಂದೋಳ, ಕುರುಬಸಿದ್ದ, ಬುಡುಬುಡಿಕೆ ಸೇರಿ 48 ಕ್ಕೂ ಸಣ್ಣ ಪಂಗಡಗಳು ತಾವು ಬೇರೆ ಬೇರೆ ಎಂಬುದನ್ನು ಮರೆತು ತಾವೆಲ್ಲಾ ಒಂದೇ ಎಂಬ ಭಾವನೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ಈಗಾಗಲೇ ದೊಂಬಿದಾಸರನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಚಿನಾ.ಹಳ್ಳಿಯಲ್ಲಿ ಮತ್ತು ಶಿರಾದಲ್ಲಿ ಮೂರು ಶಿಬಿರಗಳನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಶಿಬಿರಗಳನ್ನು ಆಯೋಜಿಸಲಾಗುವುದು. ಸಂಘಟನೆಗೆ ಶಿಕ್ಷಣ ಪ್ರಬಲ ಅಸ್ತ್ರವಾಗಿದ್ದು, ಇದನ್ನು ಅಲೆಮಾರಿ ಸಮುದಾಯಗಳು ಅಪ್ಪಿಕೊಳ್ಳಬೇಕಾಗಿದೆ. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಅವರು ಸಮಾಜದಲ್ಲಿ ಇತರೆ ಸಮುದಾಯದವರಂತೆ ಬದುಕುವ ಅವಕಾಶ ಕಲ್ಪಿಸಬೇಕಾಗಿದೆ ಎಂದು ಕೆ. ದೊರೈರಾಜು ತಿಳಿಸಿದರು.
ಕೆ.ಬಿ. ಸಿದ್ದಯ್ಯ, ಚೇಳೂರು ವೆಂಕಟೇಶ್ ಮಾತನಾಡಿದರು. ವೇದಿಕೆಯಲ್ಲಿ ಅಲೆಮಾರಿ ಸಮುದಾಯದ ರಾಮಕ್ಕ, ಹನುಮಂತರಾಯಪ್ಪ, ಜಯಲಕ್ಷ್ಮಮ್ಮ, ರಂಗಪ್ಪ, ರಾಜಪ್ಪ, ಮಮತ, ಮದಲೆಟಪ್ಪ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com