ತುಮಕೂರು: ಬೋಧನೆ, ಪ್ರಯೋಗ, ವೀಕ್ಷಣೆ ಅತಿಮುಖ್ಯ ಎಂದು ಸಿದ್ದಗಂಗಾ ಮಹಿಳಾ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ನಾಗಭೂಷಣ್ ಪ್ರತಿಪಾದಿಸಿದರು.
ಅವರು ತುಮಕೂರಿನ ಸಿದ್ದಗಂಗಾ ಮಹಿಳಾ ಪದವಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 150 ನೇ ಜನ್ಮದಿನೋತ್ಸವದ ಅಂಗವಾಗಿ ಪಿಯೂಸಿ ವಿದ್ಯಾರ್ಥಿನಿಯರಿಗೆ ಏರ್ಪಾಟಾಗಿದ್ದ ವಿಜ್ಞಾನ ವಸ್ತು ಪ್ರದರ್ಶನದ ವೇಳೆ ಮಾತನಾಡಿದರು.
ವಸ್ತು ಪ್ರದರ್ಶನದ ಅಗತ್ಯತೆ ಮಹತ್ವ ಕುರಿತು ಮಾತನಾಡಿದ ನಾಗಭೂಷಣ್, ಉಪನ್ಯಾಸಕ ಬೋಧನೆಯಿಂದ ಕಲಿತರೆ, ವಿದ್ಯಾರ್ಥಿ ಪ್ರಯೋಗಗಳಿಂದ ಕಲಿಯುತ್ತಾನೆ. ವೀಕ್ಷಕ ನೋಡುವದರಿಂದ ಕಲಿಯುತ್ತಾನೆ. ವಸ್ತು ಪ್ರದರ್ಶನ ಈ ಮೂರು ರೀತಿಗಳಿಂದ ಪ್ರಯೋಜನಕಾರಿಯಾಗಿದ್ದು, ಪರಿಣಾಮಕಾರಿಯೂ ಆಗಿದೆ. ವಿದ್ಯಾರ್ಥಿಗಳು ವಸ್ತು ಪ್ರದರ್ಶನದ ನೆರವಿನೊಂದಿಗೆ ಹೆಚ್ಚೆಚ್ಚು ಕಲಿಯಬಹುದು. ವಿಜ್ಞಾನ ವಿಭಾಗಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಕಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಹಾಗೂ ವಿದ್ಯುನ್ಮಾನ ವಿಭಾಗಗಳಲ್ಲಿ ಪ್ರಯೋಗಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಗಣಿತಶಾಸ್ತ್ರ ಈ ಮೂಲ ಶಾಖೆಗಳಿಗೆ ಹೇಗೆ ಸಂಬಂಧಪಟ್ಟಿದೆ ಎಂಬುದನ್ನು ಕೆಲವು ಗಣಿತ ಪ್ರಾತ್ಯಕ್ಷಿಕೆಗಳಿಂದ ತೋರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಆನಂದಕುಮಾರಿ, ಸ್ವಾಮಿ ವಿವೇಕಾನಂದರು ವಿಜ್ಞಾನ ಕ್ಷೇತ್ರದಲ್ಲಿ ಪ್ರಭಾವಿಸಿದ ವಿಷಯಗಳನ್ನು ಪ್ರಸ್ತಾಪಿಸಿದರು.
ಜೆಮ್ಷೆಡ್ಪುರದಲ್ಲಿ ಜೆ.ಎನ್. ಟಾಟಾ ಉಕ್ಕು ಕಾರ್ಖಾನೆ ಸ್ಥಾಪಿಸಿ, ಬೆಂಗಳೂರಿನಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಸ್ಥಾಪಿಸಲು ವಿವೇಕಾನಂದರ ಹೇಗೆ ಕಾರಣರಾದರು ಎಂಬುದರ ಕುರಿತು ವಿವರಿಸಿದರು.
ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಜಿ. ಚಿದಾನಂದಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಸೌಮ್ಯ ಪ್ರಾರ್ಥಿಸಿದರು. ಡಾ. ಆರ್. ಆನಂದಕುಮಾರಿ ಸ್ವಾಗತಿಸಿ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಬಿ. ಶಶಿಧರಯ್ಯ ವಂದಿಸಿದರು.