ತುಮಕೂರು: ಶುದ್ಧ ಚಾರಿತ್ರ್ಯವೇ ವ್ಯಕ್ತಿಯ ಜೀವಾಳವಾಗಿದ್ದು ಉತ್ತಮ ಚಾರಿತ್ರ್ಯ ಹೊಂದುವಂತೆ ಎಬಿವಿಪಿ ಜಿಲ್ಲಾ ಸಂಚಾಲಕ ನವೀನ್ಕುಮಾರ್ ಹಂಪಿ ಸಲಹೆ ನೀಡಿದರು.
ಅವರು ತುಮಕೂರು ತಾಲೂಕು ಮಲ್ಲಸಂದ್ರದ ವಿಶ್ವಭಾರತಿ ಪ.ಪೂ. ಕಾಲೇಜಿನಲ್ಲಿ ಎಬಿವಿಪಿ ವತಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 150ನೇ ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶುದ್ಧ ಚಾರಿತ್ರ್ಯ ಹೊಂದುವುದರ ಮೂಲಕ ಸ್ವಾಮಿ ವಿವೇಕಾನಂದರ ಕನಸಾದ ರಾಷ್ಟ್ರೀಯ ಪುನರ್ ನಿರ್ಮಾಣ ಕಾರ್ಯವನ್ನು ನಾವೆಲ್ಲರೂ ನೆರವೇರಿಸಬೇಕೆಂದು ತಿಳಿಸಿದರು. ವಿದ್ಯಾರ್ಥಿಗಳು ಶಿಕ್ಷಣ ಕಲಿಯುವ ನಿಟ್ಟಿನಲ್ಲಿ ಜಾಗರೂಕರಾಗಬೇಕಾಗಿದ್ದು ಗ್ರಾಮೀಣ ವಿದ್ಯಾರ್ಥಿಗಳು ಮೊಬೈಲ್ಗಳ ಬಳಕೆಗೆ ಜೋತು ಬೀಳಬಾರದು ಎಂದು ಸಲಹೆ ನೀಡಿದರು.
ಎಬಿವಿಪಿ ನಗರ ಸಂಘಟನಾ ಕಾರ್ಯದರ್ಶಿ ಹನುಮಂತರೆಡ್ಡಿ ಮಾತನಾಡಿ ಸ್ವಾಮಿ ವಿವೇಕಾನಂದರ ವಿಚಾರಗಳು ಕೇವಲ ಸಮಾಜಕ್ಕಲ್ಲ. ನನ್ನ ಒಳಿತಿಗಾಗಿ ಎಂದು ಕೊಂಡು ಸಾಗಿದಾಗ ಆ ಸಮಾಜವೇ ನಮ್ಮನ್ನು ಹಿಂಬಾಲಿಸುತ್ತದೆ ಎಂಬುದು ವಿವೇಕಾನಂದರ ಚಿಂತನೆಯಾಗಿದೆ ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ.ವಿ. ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಲ್. ಪುಟ್ಟರಾಮಯ್ಯ ಸ್ವಾಗತಿಸಿ ಕೆ.ಬಿ. ಮಂಜುನಾಥ್ ನಿರೂಪಿಸಿ ಅನುರೂಪ್ ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು, ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.