ಹುಳಿಯಾರು: ಇದೇ ತಿಂಗಳ 25 ಮತ್ತು 26 ರಂದು ಈದ್ ಮಿಲಾದ್ ಹಾಗೂ ಗಣರಾಜ್ಯೋತ್ಸವ ಕಾರ್ಯಕ್ರಮ ಇರುವುದರಿಂದ ಪಟ್ಟಣದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಶಾಂತಿ ಕದಡುವಂತಹ ಚಟುವಟಿಗೆಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಶಾಂತಿ ಸಭೆ ನಡೆಸಲಾಯಿತು.
ಪಟ್ಟಣದ ಗ್ರಾ.ಪಂ. ಸದಸ್ಯರು ಹಾಗೂ ಮುಖಂಡರೊಂದಿಗೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪೂರ್ವಭಾವಿ ಶಾಂತಿ ಸಭೆ ನಡೆಸಿದರು.
ಸಭೆಯಲ್ಲಿ ಪಿ.ಎಸ್‌ಐ. ಟಿ.ಸಿ. ರಾಜು ಮಾತನಾಡಿ, ತಾವು ಕೈಗೊಳ್ಳುವಂತಹ ಕಾರ್ಯಕ್ರಮಗಳನ್ನು ಶಾಂತಿಯುತವಾಗಿ ನಡೆಸಿ, ಮೆರವಣಿಗೆಯಾಗಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಾಗಲಿ ಅವುಗಳನ್ನು ಕ್ರಮಬದ್ಧವಾಗಿ ಮಾಡಬೇಕು. ಯಾವುದೇ ಕಾರಣಕ್ಕೂ ರಸ್ತೆ ತಡೆ ಮಾಡಿ ಮೆರವಣಿಗೆ ನಡೆಸದೇ ರಸ್ತೆಯ ಒಂದು ಬದಿಯಲ್ಲಿ ತಮ್ಮ ಉತ್ಸವ ನಡೆಯಲಿ. ಮತ್ತೊಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಡೆಸುವುದು ಸೂಕ್ತ ಎಂದರು.
ತಾವೆಲ್ಲರೂ ಒಂದೇ ಎಂಬ ಮನೋಭಾವನೆ ಹೊಂದಿ ಕಾರ್ಯಕ್ರಮ ಮಾಡಿ, ಶಾಂತಿ ಕದಡುವ ಕೃತ್ಯಗಳು ಕಂಡುಬಂದಲ್ಲಿ ತಾವು ಕಾನೂನು ಕ್ರಮ ಕೈಗೊಳ್ಳಲಾಗುವುದು. ಉತ್ಸವಗಳನ್ನು ಮಾಡುವಾಗ ಮೊದಲು ತಾವು ಯಾವ ಮಾರ್ಗಗಳಲ್ಲಿ ಸಂಚರಿಸುತ್ತೇ ಎಂಬುದನ್ನು ಪೊಲೀಸ್ ಇಲಾಖೆಯ ಗಮನಕ್ಕೆ ತಂದು ನಂತರ ಮುಂದುವರಿಯುವಂತೆ ತಿಳಿಸಿದರು.
ಈ ಸಭೆಯಲ್ಲಿ ಎ.ಎಸ್‌ಐ. ಗಂಗಾಧರಪ್ಪ, ಗ್ರಾ.ಪಂ. ಅಧ್ಯಕ್ಷೆ ಪುಟ್ಟಮ್ಮ, ಮಾಜಿ ಅಧ್ಯಕ್ಷ ಅನ್ಸರ್ ಅಲಿ, ಮಾಜಿ ಉಪಾಧ್ಯಕ್ಷೆ ವೆಂಕಟಮ್ಮ, ಗ್ರಾ.ಪಂ. ಸದಸ್ಯರಾದ ಅಶೋಕ್‌ಬಾಬು, ಮುಖಂಡರಾದ ಜಬೀಉಲ್ಲಾ, ಜಹೀರ್ ಸಾಬ್, ಜಲಾಲ್‌ಸಾಬ್, ನಂದಿಹಳ್ಳಿ ಶಿವಣ್ಣ, ಕೃಷ್ಣ, ಬಡಗಿ ರಾಮಣ್ಣ, ಮೀಸೆ ರಂಗಪ್ಪ ಇತರರಿದ್ದರು.