ಕುಣಿಗಲ್: ಆದಿಚುಂಚನಗಿರಿ ಕ್ಷೇತ್ರವನ್ನು ಅಂತರ ರಾಷ್ಟ್ರೀಯಮಟ್ಟಕ್ಕೆ ಬೆಳೆಸಿದ ಕೀರ್ತಿ ಬಾಲಗಂಗಾಧರನಾಥ ಶ್ರೀಗಳಿಗೆ ಸಲ್ಲುತ್ತದೆ. ಇಂದು ಅವರು ನಮ್ಮೊಂದಿಗೆ ಭೌತಿಕವಾಗಿ ಇಲ್ಲದಿದ್ದರೂ ಅವರು ಮಾಡಿದ ಸಾಧನೆ ಚಿರಸ್ಥಾಯಿಯಾಗಿ ನಮ್ಮ ಮುಂದಿದೆ. ಇತರೆಯವರಿಗೆ ಪ್ರೇರಣೆ ನೀಡುತ್ತಿದೆ ಎಂದು ಕಿತ್ತನಾಗಮಂಗಲ ಅರೇಶಂಕರ ಮಠಾಧೀಶರು ಹಾಗೂ ಒಕ್ಕಲಿಗ ಧರ್ಮ ಮಹಾಸಭಾದ ಅಧ್ಯಕ್ಷರಾದ ಸಿದ್ದರಾಮಚೈತನ್ಯ ಸ್ವಾಮೀಜಿ ತಿಳಿಸಿದರು.
ತಾಲೂಕು ಒಕ್ಕಲಿಗ ಸಮಾಜ ಹಾಗೂ ಒಕ್ಕಲಿಗ ಧರ್ಮ ಮಹಾಸಭಾದ ಆಶ್ರಯದಲ್ಲಿ ಪಟ್ಟಣದ ದಿವ್ಯ ಕನ್ವೇಶನ್ ಹಾಲ್ನಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಆದಿಚುಂಚನಗಿರಿ ಮಠಾಧೀಶರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಾಜಿ ಶಾಸಕ ಎಸ್.ಪಿ. ಮುದ್ದಹನುಮೇಗೌಡ ಮಾತನಾಡಿ, ಕಾಯಕಯೋಗಿಗಳಾದ ಶ್ರೀಗಳು ಮಠವನ್ನು ಜಾಗತಿಕ ಮಟ್ಟಕ್ಕೆ ಬೆಳೆಸುವಲ್ಲಿ ಸದಾ ಸರ್ವತ್ರ ಶ್ರಮಿಸಿದ ಪರಿಣಾಮ ಇಂದು ಶ್ರೀಮಠವೂ, ಜಾಗತಿಕಮಟ್ಟದಲ್ಲಿ ಹೆಸರು ಮಾಡಿದೆ. ಕೇವಲ ಧಾರ್ಮಿಕ ಕ್ಷೇತ್ರವಲ್ಲದೆ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲೂ ಅಪಾರ ಸಾಧನೆ ಮಾಡಿ ಇತರರಿಗೂ ಆದರ್ಶ ಎಂದರು.
ಜಿಪಂ ಮಾಜಿ ಅಧ್ಯಕ್ಷ, ಹಾಲಿಸದಸ್ಯ ಡಾ. ಬಿ.ಎನ್. ರವಿ ಮಾತನಾಡಿದರು. ತಹಸೀಲ್ದಾರ್ ಜಗದೀಶ್, ಅನಸೂಯಮ್ಮ ವೈ.ಕೆ. ರಾಮಯ್ಯ, ನಗರ ಕಾಂಗ್ರೆಸ್ ಅಧ್ಯಕ್ಷ ರಾಜಣ್ಣ ಮಾತನಾಡಿದರು.
ಪುರಸಭಾಧ್ಯಕ್ಷೆ ನಳಿನಾ ಭೈರಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ಹರೀಶ್, ಕನ್ನಡ ಸೇನೆ ಅಧ್ಯಕ್ಷ ಶ್ರೀನಿವಾಸ್, ಗೌರವಾಧ್ಯಕ್ಷ ನಾಗೇಶ್, ಪುರಸಭಾ ಸದಸ್ಯರಾದ ಚಂದ್ರಶೇಖರ್, ಮಂಜ, ವೆಂಕಟೇಶ್, ಸುರೇಶ್, ರಮೇಶ್, ಶಿವನಂಜಪ್ಪ, ನಾಗರತ್ನಮ್ಮ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನೂರಾರು ವಿದ್ಯಾರ್ಥಿಗಳೊಂದಿಗೆ ಪ್ರವಾಸಿ ಮಂದಿರದಿಂದ ಸಮಾರಂಭದ ಸ್ಥಳಕ್ಕೆ ಶ್ರೀಗಳ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.