ಮಧುಗಿರಿ: ಇಂದಿನ ಆಧುನಿಕ ಜಗತ್ತಿನಲ್ಲಿ ದೃಶ್ಯ ಮಾಧ್ಯಮಗಳ ಪ್ರಭಾವಕ್ಕೆ ಸಿಲುಕದೇ ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶ, ತತ್ವ ಜೀವನದ ಮೌಲ್ಯಗಳನ್ನು ಮೈಗೂಡಿಸಿಕೊಂಡು ದೇಶ ಸೇವೆಗೆ ಮುಂದಾಗಬೇಕಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಯಶೋಧ ರಾಜಣ್ಣ ಕರೆ ನೀಡಿದರು.
ತಾಲೂಕಿನ ಕಸಬಾ ಡಿ.ವಿ.ಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಭಾಷಣ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಯುವ ಜನಾಂಗ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ವಿಶಿಷ್ಟ ಚಿಂತನೆ ಹಾಗೂ ರಾಷ್ಟ್ರೀಯತೆಯ ಭಾವನೆಗೆ ಹೊಸ ರೂಪ ಕೊಟ್ಟು ಯುವ ಜನಾಂಗಕ್ಕೆ ಸ್ಪೂರ್ತಿಯಾಗಿದ್ದಾರೆ. ಹಾಗಾಗಿ, ವಿವೇಕಾನಂದರ ಆದರ್ಶ ತತ್ವ ಪಾಲಿಸಿದಾಗ ಪ್ರತಿಯೊಬ್ಬ ವಿದ್ಯಾರ್ಥಿ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ. ವಿವಿಧ ಸ್ಪರ್ಧೆಗಳಲ್ಲಿ ಬಾಗವಹಿಸಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಮಹತ್ತರ ಜವಾಬ್ದಾರಿ ತಮ್ಮ ಮೇಲಿದೆ ಎಂದರು.
ಮುಖ್ಯ ಶಿಕ್ಷಕ ಕೆ.ಎನ್.ಹನುಮಂತ ರಾಯಪ್ಪ ವಿದ್ಯಾರ್ಥಿಗಳಿಗೆ ವಿವೇಕಾನಂದರ ವಿಚಾರಧಾರೆಗನ್ನು ತಿಳಿಸಿ ಕೊಟ್ಟರು.
ಬೆಸ್ಕಾಂ ಗುತ್ತಿಗೆದಾರ ರಾಜಣ್ಣ ಶಿಕ್ಷಕ ರಂಗನಾಥ ವಿದ್ಯಾರ್ಥಿಗಳ ಕುರಿತು ಮಾತನಾಡಿದರು. ಪಾಂಡುರಂಗಪ್ಪ ಸ್ವಾಗತಿಸಿ ವಂದಿಸಿದರು.