ಶಿರಾ: ತಾಲೂಕು ಮುದಿಗೆರೆ ಕಾವಲ್ ರೈತರ ಜಮೀನುಗಳನ್ನು ಕೈಗಾರಿಕಾ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡು 3 ವರ್ಷಗಳು ಕಳೆಯುತ್ತಾ ಬಂದರೂ ಯಾವುದೇ ವೈಜ್ಞಾನಿಕ ಬೆಲೆ ನಿಗದಿಗೊಳಿಸದೆ ಹಾಗೂ ಪರಿಹಾರ ಹಣವನ್ನು ರೈತರಿಗೆ ತಲುಪಿಸದೆ ರೈತರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಮುದಿಗೆರೆ ಕಾವಲ್ ರೈತ ಪರ ಹೋರಾಟ ಸಮಿತಿ ಸದಸ್ಯ ಎಲ್.ಟಿ.ಶ್ರೀನಿವಾಸ್ ನಾಯ್ಕ ಆರೋಪಿಸಿದ್ದಾರೆ.
ಈಗಾಗಲೇ ಭೂಮಿ ಸ್ವಾಧೀನ ಪ್ರಕ್ರಿಯೆಯ ಎಲ್ಲಾ ಕಾರ್ಯಗಳು ಪೂರ್ಣಗೊಂಡಿದ್ದರೂ ಸಹ ವಿನಾಕಾರಣ ರೈತರಿಗೆ ಪರಿಹಾರ ನೀಡುವಲ್ಲಿ ನಿಧಾನಗತಿ ಅನುಸರಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಅವರು ನ.27, 2012 ರಂದು ಬೆಲೆ ನಿರ್ಧರಣಾ ಸಭೆ ನಡೆಸಿ ನಂತರ ರೈತರಿಂದ ಅಹವಾಲು ಪಡೆದಿದ್ದಾರೆ. ಅವರು ಡಿ.10, 2012 ರೊಳಗೆ ಬೆಲ ನಿರ್ಧಾರ ತಿಳಿಸುವುದಾಗಿ ಮತ್ತು ಸರ್ಕಾರದ ಮೇಲೆ ಒತ್ತಡ ಹೇರಿ ರೈತರ ಪರವಾಗಿ ಬೆಲೆ ನಿರ್ಧರಿಸುವುದಾಗಿ ಭರವಸೆ ನೀಡಿದ್ದಾರೆ. ಆದರೂ ಸಹ ಇಲ್ಲಿಯವರೆಗೂ ಯಾವುದೇ ರೀತಿಯ ಕ್ರಮ ವಹಿಸದೆ ಅವರು ನಿರ್ಲಕ್ಷ ವಹಿಸಿದ್ದಾರೆ ಎಂದಿದ್ದಾರೆ.
ಇದರಿಂದಾಗಿ ಭೂಮಿಯನ್ನು ಕಳೆದುಕೊಂಡ ರೈತರಿಗೆ ಯಾವುದೇ ಕಷ್ಟ ಕಾಲದಲ್ಲಿ ಸರಿಯಾದ ಸಾಲ ಸವಲತ್ತುಗಳು ಸಿಗದೆ ವಿನಾಕಾರಣ ಕಷ್ಟ ಅನುಭವಿಸಬೇಕಾಗಿದೆ. ಇದರ ಬಗ್ಗೆ ಸರ್ಕಾರವಾಗಲಿ, ಜಿಲ್ಲಾಧಿಕಾರಿಗಳಾಗಲಿ, ಕೈಗಾರಿಕಾ ಪ್ರಾಧಿಕಾರದವರಾಗಲಿ ರೈತರ ಬಗ್ಗೆ ಕಾಳಜಿ ವಹಿಸಿ ಬೇಗ ಈ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿದ್ದಾರೆ.
ಪರಿಹಾರ ಹಣವನ್ನು ನೀಡಿದರೆ ಭೂಮಿ ಕಳೆದುಕೊಂಡ ರೈತರು ಬೇರೆಡೆಯಾದರೂ ಭೂಮಿ ಖರೀದಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.