'ಸ್ವಾತಂತ್ರ್ಯಕ್ಕೆ ನಾಯಕತ್ವ ಬೋಧಿಸಿದ ವಿವೇಕಾನಂದರು'

Updated on: 

ತುಮಕೂರು:  ವಿವೇಕಾನಂದರ ವಿಚಾರಧಾರೆಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿದೆ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ಕೊಡ್ಲಿ ಅಭಿಪ್ರಾಯಪಟ್ಟರು.
ಇಲ್ಲಿನ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿವೇಕಾನಂದರ 150 ನೇ ವರ್ಷದ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದೇಶಿಯವಾದುದ್ದೆಲ್ಲವೂ ಶ್ರೇಷ್ಠವೆಂಬ ಮೌಢ್ಯದಲ್ಲಿ ಬದುಕುತ್ತಿದ್ದ ಭಾರತೀಯ ಜನಮಾನಸದ ಚಿಂತನಾ ಕ್ರಮಕ್ಕೆ ದಾಸ್ಯ ಪ್ರಜ್ಞೆ ಒಪ್ಪಿಕೊಳ್ಳುವಂತ ಆಲೋಚನೆಗಳಿಗೆ ತಮ್ಮ ಧೀರೋದಾತ್ತ ಉಕ್ತಿಗಳಿಂದ ಮರ್ಮಾಘಾತವಾಗುವಂತೆ ಪ್ರಹಾರ ಮಾಡಿದ್ದರು ಎಂದರು.
ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬೇಕಾದ ನಾಯಕತ್ವ, ಮಾನಸಿಕ ದೃಢತೆ ಮತ್ತು ಪೂರ್ವ ತಯಾರಿಗಳನ್ನು ಉಂಟು ಮಾಡಿದ್ದರು ಎಂದು ಬಣ್ಣಿಸಿದರು.
ಚಿಕಾಗೋದಲ್ಲಿನ ವಿಶ್ವಧರ್ಮಗಳ ಸಮ್ಮೇಳನದಲ್ಲಿನ ಸಭಿಕರನ್ನು ಣಪ್ರೀತಿಯ ಸಹೋದರ ಸಹೋದರಿಯರೇ  ಎಂದು ಸಂಬೋಧಿಸಿ ವಿಶ್ವ ಭ್ರಾತೃತ್ವವನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಸಂಚಲನ ಮೂಡಿಸಿದ್ದರು ಎಂದರು.
ಭಾರತೀಯ ತತ್ವಾದರ್ಶಗಳ ಅಧ್ಯಯನದ ಪುನರುತ್ಥಾನಕ್ಕೆ ಕಾರಣರಾದ ವಿವೇಕಾನಂದರ ವಿಚಾರಧಾರೆಗಳು ಇಂದಿನ ಸಂಘರ್ಷದ ದಿನಗಳಲ್ಲೂ ನಮಗೆ ಹೆಚ್ಚು ಪ್ರಸ್ತುತವೆಂದು ನುಡಿದರು. ಅವುಗಳನ್ನು ಅಳವಡಿಸಿಕೊಂಡಲ್ಲಿ ಪ್ರತಿಯೊಬ್ಬನ ವ್ಯಕ್ತಿತ್ವದ ವಿಕಾಸವಾಗುತ್ತದೆ ಎಂದು ವಿಶ್ಲೇಷಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸುಕುಮಾರನ್ ಮಾತನಾಡಿ, ವಿವೇಕಾನಂದರು ಧರ್ಮದ ಕರ್ಮಠ ಅನುಯಾಯಿಗಳಾಗದೆ ಧೀರತ್ವವನ್ನು ಮಾನವನ ವ್ಯಕ್ತಿತ್ವದೊಡನೆ ಸಂಯೋಜಿಸಿ ಉತ್ತಮ ಸಮಾಜ, ಮೌಲ್ಯಭರಿತ ಜೀವನ, ಅಂತರಂಗದ ಶುದ್ಧತೆ, ಕರ್ತೃತ್ವದಂತಹ ವಿಷಯಗಳಿಗೆ ಒತ್ತುಕೊಟ್ಟಿದ್ದರು ಎಂದರು.
ದುರ್ಬಲವೆಂದು ಯೋಚಿಸುವುದೇ ಜೀವನದ ದೊಡ್ಡ ದೌರ್ಬಲ್ಯವೆಂಬ ವಿವೇಕರ ಚಿಂತನೆ ಭಾರತದಂತಹ ಬಲಿಷ್ಟರಿಗೆ ಸದ್ಯದಲ್ಲಿ ಹೆಚ್ಚು ಅನ್ವಯವೆಂದು ನುಡಿದ ಅವರು ದಿಟ್ಟ ಯೋಚನೆ ಎಲ್ಲರ ವ್ಯಕ್ತಿತ್ವದ ಭಾಗವಾಗಲೆಂದು ಹಾರೈಸಿದರು.
ಮಮತಾ ಪ್ರಾರ್ಥಿಸಿ ಪ್ರೊ. ಎಚ್.ಆರ್. ರಂಗನಾಥ್ ಸ್ವಾಗತಿಸಿ, ಪ್ರೊ. ಸಿ.ನಾಗರಾಜ್ ನಿರೂಪಿಸಿ ಪ್ರೊ. ಪಿ.ಎಂ. ಚಂದ್ರಶೇಖರಯ್ಯ ವಂದಿಸಿದರು. ಕಾರ್ಯಕ್ರಮ ಸಂಘಟಕ ಪ್ರೊ. ಬಿ.ಎಚ್. ವಾಸುದೇವಮೂರ್ತಿ, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com