ಕಂಬಳಿ ನೇಕಾರನ ಬದುಕು ಅತಂತ್ರ

Updated on: 

ಕ.ಪ್ರ.ವಾರ್ತೆ  ಮೊಳಕಾಲ್ಮುರು ಮಾ.29
ಸರ್ಕಾರದ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಬೇಜವಾಬ್ದಾರಿತನ ಹಾಗೂ ಅಧಿಕಾರಿಗಳ ಅಸಡ್ಡೆಯಿಂದ ತಾಲೂಕಿನ ಕಂಬಳಿ ನೇಕಾರನ ಬದುಕು ದೀಪದ ಕೆಳಗಿನ ನೆರಳಿನಂತಾಗಿ ನರಳುತ್ತಿದೆ.
 ತಾಲೂಕಿನ ಕೊಂಡ್ಲಹಳ್ಳಿ, ಮೂಗಲಹಳ್ಳಿ, ಕೋನಸಾಗರ, ಊಡೇವು, ನಾಗಸಮುದ್ರ, ತಿಮ್ಮಲಾಪುರ, ಕರಡಿಹಳ್ಳಿ, ಕಾಡುಸಿದ್ದಾಪುರ, ಪೆನ್ನಮ್ಮನಹಳ್ಳಿ, ಎನ್‌ಆರ್‌ಕೆ ಪುರ, ವೆಂಕಟಾಪುರ, ಬೊಮ್ಮದೇವರಹಳ್ಳಿ, ರಾಜಾಪುರ, ಬೊಮ್ಮಕ್ಕನಹಳ್ಳಿ ಹಾಗೂ ಕಣ್‌ಕುಪ್ಪೆ ಗಳಲ್ಲಿ ಹೆಚ್ಚಾಗಿ ಕುರುಬ ಸಮುದಾಯದವರು ನೆಲೆಸಿದ್ದಾರೆ.
ಅನ್ಯ ಮಾರ್ಗ: ಹಿಂದೆ ಈ ಎಲ್ಲಾ ಗ್ರಾಮಗಳಿಂದ ಸಾವಿರಾರು ಲೆಕ್ಕದಲ್ಲಿದ್ದ ಕಂಬಳಿ ತಯಾರಿಸುವ ಮಗ್ಗಗಳ ಸಂಖ್ಯೆ ಸರ್ಕಾರದ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಪ್ರೋತ್ಸಾಹದ ಕೊರತೆಯಿಂದ ಇಂದು ನೂರರ ಲೆಕ್ಕಕ್ಕಿಳಿದಿವೆ. ಸಮುದಾಯದವರು ವೃತ್ತಿಯ ಮೇಲೆ ವೈಷಮ್ಯ ತೋರಿ ಕಸುಬು ಕೈ ಬಿಟ್ಟು ಬದುಕಲು ಅನ್ಯ ಮಾರ್ಗಗಳನ್ನು ಅನುಸರಿಸುವಂತಾಗಿದೆ.
ನೂರೈವತ್ತು ರುಪಾಯಿ ಮಾತ್ರ: ಇಲ್ಲಿ ತಯಾರಿಸುವ ಕರಿಕಂಬಳಿ, ಜಾಡಿ, ಪಟ್ಟೇವು, ಮಟ್ಟೆ ಕಂಬಳಿಗಳು ಚಳಿಗಾಲ ಹಾಗೂ ಮಳೆಗಾಲಗಳಲ್ಲಿ ಇಂದಿಗೂ ಬೇಡಿಕೆ ಉಳಿಸಿಕೊಂಡಿರುವುದು ಇಲ್ಲಿನ ಕಂಬಳಿಗಳ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ. ಇಲ್ಲಿನ ಬಡ ನೇಕಾರ ಎರಡು ದಿನಕ್ಕೊಂದು ಕಂಬಳಿ ತಯಾರಿಸುತ್ತಾನೆ. ಒಂದು ಕಂಬಳಿ ತಯಾರಿಸಲು ಮನೆಯ ಮಹಿಳೆಯರ ಸಹಕಾರ ಸೇರಿದಂತೆ ನಾಲ್ಕೈದು ಜನರ ಅವಶ್ಯಕತೆ ಇರುತ್ತದೆ. ಒಂದು ಕರಿಕಂಬಳಿಯು ರು.500 ರಿಂದ 700 ರವರೆಗೂ ಹಾಗೂ ಉಳಿದ ಕಂಬಳಿಗಳ ಬೆಲೆ ರು.300 ರಿಂದ 500 ಬೆಲೆ ಬಾಳುತ್ತವೆ. ಆದರೆ, ಕಂಬಳಿ ತಯಾರಿಸಿದ ನೇಕಾರನ ಕೂಲಿ ಕೇವಲ ನೂರರಿಂದ ನೂರೈವತ್ತು ರುಪಾಯಿ ಮಾತ್ರ ಎನ್ನುವುದು ಗಮನಾರ್ಹ.
ಸವಲತ್ತುಗಳು ದೊರೆತಿಲ್ಲ: ತಾಲೂಕಿನಲ್ಲಿ ನೇಕಾರರ ಅಭಿವೃದ್ಧಿಗೆಂದು ಪ್ರಾರಂಭಗೊಂಡಿದ್ದ ಉಣ್ಣೆ ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘಗಳು ಕಂಬಳಿ ಖರೀದಿ ಸ್ಥಗಿತಗೊಳಿಸಿವೆ. ಕೊಂಡ್ಲಹಳ್ಳಿಯ ಸಂಘ ಮಾತ್ರ ಕಾರ್ಡಿಂಗ್ ಮೆಷಿನ್ (ಉಣ್ಣೆಯನ್ನು ಹಿಂಜಿ ಮೃದು ಮಾಡುವ ಯಂತ್ರ) ವ್ಯವಸ್ಥಿತ ಕಟ್ಟಡ, ಗೋಡೌನ್ ಹಾಗೂ ಕಾಂಪ್ಲೆಕ್ಸ್‌ಗಳನ್ನು ನಿರ್ಮಿಸಿಕೊಂಡು ಜಿಲ್ಲೆಯಲ್ಲಿಯೇ ಒಂದನೇ ಸ್ಥಾನದಲ್ಲಿದೆ. ಉಳಿದಂತೆ ನೇಕಾರರಿಗೆ ಈ ಸೊಸೈಟಿಗಳಿಂದ ಸಮರ್ಪಕ ರೀತಿಯಲ್ಲಿ ಸವಲತ್ತುಗಳು ದೊರೆತಿಲ್ಲ ಎನ್ನುವ ದೂರು ವ್ಯಾಪಕವಾಗಿದೆ.
ವಲಸೆ: ಕಂಬಳಿ ತಯಾರಿಸುವ ನೇಕಾರನಿಗೆ ಅಸ್ಥಮಾ, ಉಬ್ಬಸ, ಎದೆ ನೋವುಗಳಂತಹ ಖಾಯಿಲೆಗಳು ಖಾಯಂ ಎನ್ನುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಕುರುಬ ಸಮುದಾಯದ ಯುವಕರು ವೃತ್ತಿಯನ್ನು ನಂಬಿದರೆ ಅತೃಪ್ತಿ ಎಂದರಿತು ಬದುಕು ಹಸನಾಗಿಸಿಕೊಳ್ಳಲು ನಗರ ಪ್ರದೇಶಗಳಿಗೆ ವಲಸೆ ಹೋದರೆ ಇನ್ನೂ ಕೆಲವರು ಗ್ರಾಮಗಳಲ್ಲಿಯೇ ಗಾರೆ ಕೆಲಸ ಸೇರಿದಂತೆ ಇತರ ಕೆಲಸ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.
 ಹಲವು ವರ್ಷಗಳ ಹಿಂದೆ ಜವಳಿ ಇಲಾಖೆ ತಾಲೂಕಿನಲ್ಲಿ ಕೇವಲ 20 ಜನರಿಗೆ ಬ್ಯಾರೆಕ್ ಬ್ಲಾಂಕೆಟ್ ತಯಾರಿಸುವ ತರಬೇತಿ ನೀಡಿ ಇದುವರೆಗೂ ತಿರುಗಿ ನೋಡಿಲ್ಲ. ನೇಕಾರ ಎಂದರೆ ಸಾಕು ತಾಲೂಕಿನ ಯಾವುದೇ ಬ್ಯಾಂಕ್‌ಗಳು ಸಾಲಸೌಲಭ್ಯ ನೀಡುವುದಿಲ್ಲ ಎನ್ನುವ ಮಾತು ಇಲ್ಲಿ ಜನಜನಿತವಾಗಿದೆ. ಬಡ ನೇಕಾರರ ಮಕ್ಕಳು ವಿದ್ಯಾಭ್ಯಾಸಕ್ಕೂ ಪರದಾಡುವಂತಾಗಿದೆ.
 ದಕ್ಷಿಣ ಭಾರತದಲ್ಲಿಯೇ ಏಕೈಕ ಎಂದು ಬಿಂಬಿತಗೊಂಡು ಐದು ಸಾವಿರ ನೇಕಾರರಿಗೆ ಉದ್ಯೋಗ ನೀಡುವ ಸಲುವಾಗಿಯೇ ಚಳ್ಳಕೆರೆಯಲ್ಲಿ ಪ್ರಾರಂಭಗೊಂಡಿದ್ದ ರಾಜ್ಯ ಉಣ್ಣೆ ಕೈಮಗ್ಗ ಸಹಕಾರ ಸಂಘಗಳ ಮಹಾ ಮಂಡಳಿಗೆ ಸರ್ಕಾರ ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಸಂಬಂಧಿಸಿದ ಯಂತ್ರಗಳನ್ನು ವಿತರಿಸದ ಹಿನ್ನೆಲೆಯಲ್ಲಿ ಇದುವರೆಗೂ ಕೇವಲ ನೂರು ಜನರಿಗೆ ಮಾತ್ರ ಉದ್ಯೋಗ ನೀಡಲು ಸಾಧ್ಯವಾಗಿದೆ. ಉಳಿದವರ ಉದ್ಯೋಗದ ಗತಿ ಏನು ಎಂದು ಪ್ರಶ್ನಿಸಿದರೆ ಸಂಘ ಸರ್ಕಾರದ ಕಡೆ ಕೈ ತೋರಿಸುತ್ತಿದೆ.
 ಮಹಾ ಮಂಡಳಿಗೆ ಸಂಬಂಧಿಸಿದ ಯಂತ್ರಗಳನ್ನು ವಿತರಿಸುವ ಕಾರ್ಯಕ್ಕೆ ಇತ್ತೀಚೆಗೆ ಟೆಂಡರ್ ಕರೆಯಲಾಗಿದೆ. ಈ ಯಂತ್ರಗಳು ಸರಬರಾಜಾದಲ್ಲಿ ಮಂಡಳಿಯ ಚಟುವಟಿಕೆಗಳು ಚುರುಕುಗೊಳ್ಳಲಿವೆ. ಈ ಮಂಡಳಿಗೆ ಕಚ್ಚಾ ವಸ್ತುಗಳ ಕೊರತೆ ಕಾಣದು. ಹೆಚ್ಚು ಜನರಿಗೆ ಉದ್ಯೋಗ ನೀಡಿ ಕುರುಬ ಸಮುದಾಯದವರನ್ನು ಆರ್ಥಿಕವಾಗಿ ಬಲ ಪಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳುವ ಉತ್ಸಾಹ ಮಂಡಳಿಯ ಕಾರ್ಯದರ್ಶಿಯದ್ದಾಗಿದೆ. ಆದರೆ, ಸರ್ಕಾರ ಸ್ಪಂದಿಸಬೇಕಷ್ಟೇ.
 ಸರ್ಕಾರ ಕುರುಬ ಜನಾಂಗಕ್ಕೆ ಈವರೆಗೂ ಭೀಮಾ ಗುಲ್ಕರ್ ಯೋಜನೆಯಡಿ ವರ್ಷಕ್ಕೆ ಗರಿಷ್ಠ ರು.15 ಸಾವಿರ, ಶಾಲಾ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸ್ಕಾಲರ್‌ಷಿಪ್ ನೀಡಿ ಪ್ರೋತ್ಸಾಹಿಸುವುದು ಬಿಟ್ಟರೆ ಜನಾಂಗ ಹಾಗೂ ನೇಕಾರಿಕೆಯ ಅಭಿವೃದ್ಧಿಗೆ ಇನ್ನಾವುದೇ ಯೋಜನೆಗಳನ್ನು ರೂಪಿಸದಿರುವುದೇ ಸಮಸ್ಯೆಗಳು ದ್ವಿಗುಣಗೊಳ್ಳಲು ಕಾರಣವಾಗಿದೆ. ಸೊಸೈಟಿಗಳವತಿಯಿಂದ ವರ್ಕ್‌ಶೆಡ್ ಹಾಗೂ ಮನೆಗಳನ್ನು ನಿರ್ಮಿಸಲು ನೀಡುವ ಸಹಾಯಧನ ಉಳ್ಳವರ ಪಾಲಾಗುತ್ತಿವೆ.
 ಸರ್ಕಾರ ಮಹಾ ಮಂಡಳಿಗೆ ಹೆಚ್ಚಿನ ಆದ್ಯತೆ ನೀಡಿ ದುಡಿಮೆ ಬಂಡವಾಳ, ಸಾಲಸೌಲಭ್ಯ, ಕಾಮನ್ ಶೆಡ್‌ಗಳ ನಿರ್ಮಾಣ ಸೇರಿದಂತೆ ಮಗ್ಗದ ಸಲಕರಣೆಗಳನ್ನು ನೀಡಿ ಪ್ರೋತ್ಸಾಹಿಸಬೇಕು. ಈ ಭಾಗದಲ್ಲಿ ಸಮುದಾಯದವರು ಹೆಚ್ಚಿರುವ ಕಾರಣ ಜವಳಿ ಪಾರ್ಕ್ ಸ್ಥಾಪಿಸಿ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು. ಆಸಕ್ತರಿಗೆ ತರಬೇತಿಗಳನ್ನು ಕಾಲಕಾಲಕ್ಕೆ ನೀಡಿ ಆಧುನಿಕತೆಗೆ ಒತ್ತು ನೀಡಬೇಕು ಮತ್ತು ನೇಕಾರ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತ್ಯೇಕವಾದ ಉಚಿತ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು ಎನ್ನುವುದು ನೊಂದ ಬಡ ನೇಕಾರನ ಬೇಡಿಕೆಗಳಾಗಿವೆ.
 ದಿನಪೂರ್ತಿ ಮಗ್ಗದ ಕುಣಿಯೊಳಗೆ ಕುಳಿತು ದುಡಿದರೂ ಕಂಬಳಿ ತಯಾರಕನ ಜೀವನದ ಮಟ್ಟ ಸರಿಹೋಗದು ಎನ್ನುವ ಪರಿಸ್ಥಿತಿ ಇದೆ. ಇನ್ನು ಮುಂದಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳುವಲ್ಲಿ ಮುಂದಾಗುವರೇ ಎಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com