ಇಂದು ಕುರುಕ್ಷೇತ್ರ ನಾಟಕ

Updated on: 

ತಿಪಟೂರು:  ಇಲ್ಲಿನ ಶ್ರೀರಾಮ ಕೃಪಾ ಪೋಷಿತ ನಾಟಕ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತುಮಕೂರು ವತಿಯಿಂದ ಚಿಕ್ಕನಾಯಕನಹಳ್ಳಿ ತಾಲೂಕಿನ ಮಲ್ಲಿಗೆರೆಯಲ್ಲಿ ಕರಿಯಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ರಾತ್ರಿ 8.30ಕ್ಕೆ 'ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ' ಎಂಬ ಪೌರಾಣಿಕ ನಾಟಕ ನಡೆಯಲಿದೆ. ಕರಿಯಮ್ಮ ದೇವಿ ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.  
ಸುರೇಶ್‌ಗೌಡಗೆ ದಿ ಬೆಸ್ಟ್ ಅವಾರ್ಡ್
ತುಮಕೂರು: ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್‌ಗೌಡರಿಗೆ ನವದೆಹಲಿಯ ಶೈನಿಂಗ್ ಇನ್‌ಫೋ ಮೀಡಿಯಾ ಅವಾರ್ಡ್ ಲಭಿಸಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳನ್ನು ಅಧ್ಯಯನ ಮಾಡಿ  ಒಂದು ಸಮೀಕ್ಷೆ ನಡೆಸಿ ಉತ್ತಮ ಹಾಗೂ ಹೆಚ್ಚಿನ ಸಾಧನೆ ಮಾಡಿರುವ 10 ಶಾಸಕರಿಗೆ ಈ ಪ್ರಶಸ್ತಿ ನೀಡಿದ್ದು ಇದರಲ್ಲಿ ತುಮಕೂರು ಗ್ರಾಮಾಂತರ ಶಾಸಕರು ಕೂಡ ಒಬ್ಬರು.
ಅಕ್ರಮ ಮರಳು ಸಾಗಾಣೆ: 6 ಲಾರಿ ವಶ
ಶಿರಾ: ರಾತ್ರಿವೇಳೆ ಕಾರ್ಯಾಚರಣೆ ನಡೆಸಿದ ತಹಸೀಲ್ದಾರ್ ನೇತೃತ್ವದ ತಂಡ ಕಳ್ಳಂಬೆಳ್ಳ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದ 6 ಲಾರಿಗಳನ್ನು ವಶಪಡಿಸಿಕೊಂಡು ಕಳ್ಳಂಬೆಳ್ಳ ಠಾಣೆಗೆ ಒಪ್ಪಿಸಿದ್ದಾರೆ. ವಶಪಡಿಸಿಕೊಂಡ ಲಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ತಹಸೀಲ್ದಾರ್ ಕಾಂತರಾಜು ತಿಳಿಸಿದ್ದಾರೆ. ಅಲ್ಲದೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 7 ಮರಳು ತುಂಬಿದ ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು,  ದಂಡ ವಿಧಿಸಲಾಗಿದೆ. ಮತ್ತೆ ಕೆಲವು ವಾಹನ ಮತ್ತು ಅದರ ಮಾಲಿಕರ ವಿರುದ್ಧ ಕ್ರಿಮಿನಲ್ ಪ್ರಕರಣದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.
ಲಂಚ ಸ್ವೀಕಾರ: ಎಸ್‌ಒ ಬಂಧನ
ಮಧುಗಿರಿ: ತಾಲೂಕಿನ ಬಡವನಹಳ್ಳಿ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಪರಿವರ್ತಕಗಳ ಇಂಡೆಂಟ್ ನೀಡುವುದಕ್ಕೆ ಗುತ್ತಿಗೆದಾರನಿಂದ ಲಂಚ ಸ್ವೀಕರಿಸುತ್ತಿದ್ದಾಗ ಎಸ್‌ಒ ಲಕ್ಷ್ಮೀಕಾಂತ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಗುತ್ತಿಗೆದಾರ ರಂಗನಾಥ ಬಡಿಗೊಂಡನಹಳ್ಳಿ, ಮಲ್ಲೇನಹಳ್ಳಿ ಗ್ರಾಮದ ರೈತರ ಐಪಿ ಸೆಟ್‌ಗಳಿಗೆ ವಿದ್ಯುತ್ ಪರಿವರ್ತಕ ನೀಡುವಂತೆ ಎಸ್‌ಒ ಅವರಿಗೆ ಬೇಡಿಕೆ ಸಲ್ಲಿಸಿದ್ದರು. ಈ ಸಂಬಂಧ ಎಸ್‌ಒ ಲಕ್ಷ್ಮೀಕಾಂತ್ 10 ಸಾವಿರ ರು. ನೀಡುವಂತೆ ಬೇಡಿಕೆ ಇಟ್ಟಿದ್ದರು. ಮೊದಲ ಕಂತಾಗಿ 8 ಸಾವಿರ ರು. ನೀಡುತ್ತಿದ್ದಾಗ ತುಮಕೂರು ಲೋಕಾಯುಕ್ತ ಇನ್ಸ್‌ಪೆಕ್ಟರ್ ರಮೇಶ್‌ಕುಮಾರ್ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಬಲೆಗೆ ಲಕ್ಷ್ಮೀಕಾಂತ್ ಬಿದ್ದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಲಕ್ಷ್ಮೀಕಾಂತ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com