ಕ.ಪ್ರ.ವಾರ್ತೆ ತುಮಕೂರು ಮಾ.29
ಕೊರಟಗೆರೆ ಮೀಸಲು ಕ್ಷೇತ್ರದಲ್ಲಿ ಬಹುಸಂಖ್ಯಾತ ಮಾದಿಗ ಜನಾಂಗದವರಿಗೆ ಟಿಕೆಟ್ ನೀಡದ ಜೆಡಿಎಸ್ ಪಕ್ಷವನ್ನು ಸೋಲಿಸುವ ಪಣವನ್ನು ಬಾಬಾ ಅಂಬೇಡ್ಕರ್ ಜಗಜೀವನರಾಂ ಜನಜಾಗೃತಿ ಸಮಿತಿ ತೊಟ್ಟಿದೆ.
ಈ ಸಂಬಂಧ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಸಮಿತಿ ಸದಸ್ಯರು, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮತ್ತು ಕೊರಟಗೆರೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಾದಿಗ ಜನಾಂಗದ ಮತದಾರರೇ ಇದ್ದಾರೆ. ಇಷ್ಟಿದ್ದರೂ ಜೆಡಿಎಸ್ ಮಾದಿಗ ಜನಾಂಗದ ಮುಖಂಡರಿಗೆ ಕೊರಟಗೆರೆ ಮೀಸಲು ಕ್ಷೇತ್ರದಲ್ಲಿ ಟಿಕೆಟ್ ಕೊಡದೆ ಮಾದಿಗ ಮುಖಂಡರನ್ನು ವಂಚಿಸಿದೆ ಎಂದರು.
ಜೆಡಿಎಸ್ ನಾಯಕರು ಮಾದಿಗ ಜನಾಂಗದ ಮುಖಂಡರು ನಂಬಿಕೆಗೆ ಅನರ್ಹರು ಎಂದು ಪ್ರಚಾರ ಮಾಡುತ್ತಾ ಜನಾಂಗದ ಸ್ವಾಭಿಮಾನಕ್ಕೆ ಅವಮಾನ ಮಾಡುತ್ತಿದ್ದಾರೆ. ಆದರೆ ಜೆಡಿಎಸ್ ಪಕ್ಷದವರು ಯಾವ ಜಾತಿ, ಸಮುದಾಯದ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
2004 ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಕಲ್ಪಿಸುತ್ತೇವೆಂದು ಹೇಳಿ ಜೆಡಿಎಸ್, ಬಿಜೆಪಿ ಸಮ್ಮಿಶ್ರವಾಗಿ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಒಂದೇ ಒಂದು ಬಾರಿ ವಿಧಾನಸಭೆಯಲ್ಲಿ ಒಳಮೀಸಲಾತಿ ಚರ್ಚೆಗೆ ಅವಕಾಶ ಕೊಡಲಿಲ್ಲ ಎಂದು ಟೀಕಿಸಿದರು.
ಜಿಲ್ಲೆಯ ಮಾದಿಗ ಜನಾಂಗದ ಕೆಲವರು ಮುಖಂಡರೆಂಬ ಸೋಗಿನಲ್ಲಿ ಯಾವ ಪುರುಷಾರ್ಥಕ್ಕಾಗಿ ಜೆಡಿಎಸ್ ಜತೆ ಇದ್ದಾರೆಂಬುದು ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದರು.