'ಹಿಂಸೆ ಎಂದಿಗೂ ಪ್ರೀತಿ ತರದು'

Updated on: 

ಕ.ಪ್ರ.ವಾರ್ತೆ ತುಮಕೂರು ಮಾ.29
ಧರ್ಮವೆಂದರೆ ಮನುಷ್ಯ ಮನುಷ್ಯನಾಗಿ ಬಾಳುವ ಮಾರ್ಗ ಈ ನಿಟ್ಟಿನಲ್ಲಿ ಹಿಂಸೆ ಎಂದಿಗೂ ಪ್ರೀತಿ ತರಲಾರದು ಎಂದು ಸುಕ್ಷೇತ್ರ ಭಗವಾನ್ ಮಹರ್ಷಿ ವಾಲ್ಮೀಕಿ ಸೇವಾ ಸಂಸ್ಥಾನ ಮಹಾಪೀಠದ ವಾಲ್ಮೀಕಿ ಸಂಜಯಕುಮಾರ್ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಜಯನಗರ ಪೂರ್ವ ಬಡಾವಣೆಯ ಸಾಯಿಚೇತನ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಿರಡಿ ಸಾಯಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಭವ್ಯಭಾರತದ ಸಂಪತ್ತು ಧಾರ್ಮಿಕತೆ. ಅದು ಜಗತ್ತಿಗೆ ಕೊಟ್ಟಿರುವ ಅಮೂಲ್ಯ ಐಶ್ವರ್ಯ. ಪವಿತ್ರ ಹಿನ್ನೆಲೆಯುಳ್ಳ ಭಾರತೀಯರು ಶಾಂತಿಪ್ರಿಯರು. ಸ್ವಾತಂತ್ರ್ಯವನ್ನು ಶಾಂತಿಯಿಂದಲೇ ಪಡೆದುಕೊಂಡ ಅಹಿಂಸಾವಾದಿಗಳು ಎಂದು ಬಣ್ಣಿಸಿದರು. ಹಿಂಸೆ ಎಂದಿಗೂ ಪ್ರೀತಿಯನ್ನು ತರಲಾರದು. ಸ್ವಾತಂತ್ರ್ಯದ ಜೀವಾಳ ನಿಸ್ವಾರ್ಥ ಮತ್ತು ತ್ಯಾಗ. ಸ್ವಾತಂತ್ರ್ಯ ಬಂದ ಮೇಲೆ ರಾಷ್ಟ್ರ ಪ್ರವರ್ಧಿಸಬೇಕಾಗಿತ್ತು. ಆದರೆ ಜೀವನಾವಶ್ಯಕ ಸೌಲಭ್ಯಗಳನ್ನು ಒದಗಿಸಲಾಗದೆ ಭಾರತೀಯರು ಅನ್ನ, ಬಟ್ಟೆ ವಸತಿಯಂತಹ ಮೂಲಭೂತ ಅವಶ್ಯಕತೆಗಳಿಲ್ಲದೆ ಪರಿತಪಿಸುತ್ತಿದ್ದಾರೆ ಎಂದರು.
ಅಂತವರಿಗೆ ನೆಮ್ಮದಿಯ ಜೀವನ ಲಭಿಸುವಂತಾಗಬೇಕು. ಅದಕ್ಕಾಗಿ ಧರ್ಮ ಬೇಕೇ ಬೇಕು ಎಂದು ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.  ಮ್ಯಾನೇಜಿಂಗ್ ಟ್ರಸ್ಟಿ ಎಂ.ಹೆಚ್. ಗೋಪಾಲ್, ಟ್ರಸ್ಟಿಗಳಾದ ಎಸ್. ಮಹದೇವಯ್ಯ, ಪಂಡಿತ್ ಮಣಿರತ್ನಂ, ನವೀನ್ ಕೊಪ್ಪಲ್, ಪ್ರವೀಣ್ ಶಿಂಧೆ, ಡಾ.ಅಂಜನ್‌ಕುಮಾರ್ ವಾಲ್ಮೀಕಿ, ಪರಮೇಶ್, ಮಹಾಲಕ್ಷ್ಮೀ, ಪದ್ಮಾ, ಎನ್.ಎಸ್. ವಸುಂಧರ, ಸುಜಾತ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com