ತುಮಕೂರು: ಆರಂಭದಿಂದ ಈವರೆಗೆ ಹೇಮಾವತಿ ನಾಲೆ ಒಡೆದು ಹೋಗಿರುವ ಬಗ್ಗೆ ತನಿಖೆ ಮಾಡಿ ಸತ್ಯಾಂಶವನ್ನು ಜನತೆಗೆ ತಿಳಿಸಲು ತುಮಕೂರು ಮಾಜಿ ಸಂಸದ ಜಿ.ಎಸ್. ಬಸವರಾಜ್ ಆಗ್ರಹಿಸಿದ್ದಾರೆ.
ಪ್ರಸ್ತುತ ನಾಲೆ ಒಡೆದಿರುವ ಸ್ಥಳವಲ್ಲದೆ ಬೇರೆ ಭಾಗದಲ್ಲೂ ನಾಲಾ ಬಿರುಕು ಬಿಡುವ ಸಂಭವ ಇರುವುದರಿಂದ ಕೂಡಲೇ ಅಧಿಕಾರಿಗಳ ತಂಡ ಸಮೀಕ್ಷೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ತುಮಕೂರು ನಾಲಾ ಭಾಗದಲ್ಲಿ ಕಲ್ಲು, ಮಣ್ಣು, ಜೊಂಡು, ಬೇಲಿ ಇತ್ಯಾದಿ ಅಡೆತಡೆಗಳಿಂದ ನಿಗದಿತ ಪ್ರಮಾಣದ ನೀರು ಹರಿಯುವ ಸಾಧ್ಯತೆ ಇಲ್ಲ. ಒಡೆದಿರುವ ನಾಲೆಯನ್ನು ದುರಸ್ತಿ ಮಾಡುವುದರ ಜೊತೆಗೆ ತುಮಕೂರು ನಾಲೆಯನ್ನು ದುರಸ್ತಿ ಮಾಡುವುದು ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.
0ಕಿ.ಮೀ ನಿಂದ 72ನೇ ಕಿ.ಮೀ ವರೆಗೆ ಸುಮಾರು 525 ಕೋಟಿ ವೆಚ್ಚದಲ್ಲಿ ನಾಲಾ ಆಧುನಿಕರಣಗೊಳಿಸಲು ವೇಳೆಯಲ್ಲಿಯೇ ಪ್ರವಾಹ ಸಂದರ್ಭದ ನೀರನ್ನು ಪಡೆಯಲು ಸಾಧ್ಯವಾಗುವಂತಹ ಹೆಚ್ಚಿನ ಸಾಮರ್ಥ್ಯದ ಕಾಲುವೆ ನಿರ್ಮಿಸುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ಜೊತೆಯಲ್ಲಿಯೇ ತುಮಕೂರು ನಾಲೆಯನ್ನೂ ಸುಮಾರು 4 ಸಾವಿರ ಕ್ಯುಸೆಕ್ ಸಾಮರ್ಥ್ಯಕ್ಕೆ ಹೆಚ್ಚಿಸುವುದು ಅಗತ್ಯವಿದೆ. ಕೂಡಲೇ ಸಾಧ್ಯತಾ ವರದಿ ತಯಾರಿಸಲು ಉನ್ನತ ಮಟ್ಟದ ತಾಂತ್ರಿಕ ಸಮಿತಿ ರಚಿಸಲು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಇದರ ಜೊತೆಯಲ್ಲಿಯೇ ಅಚ್ಚುಕಟ್ಟು ಪ್ರದೇಶದಲ್ಲಿನ, ಕಾಲುವೆ, ಉಪಕಾಲುವೆ, ಹಳ್ಳ, ಖರಾಬು, ಕೋಡಿ ಹಳ್ಳ ಇತ್ಯಾದಿ ಒತ್ತುವರಿ ತೆರವುಗೊಳಿಸಿ, ಅಭಿವೃದ್ಧಿಗೊಳಿಸಿ ವ್ಯರ್ಥವಾಗುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಶಾಶ್ವತ ಯೋಜನೆ ರೂಪಿಸಬೇಕು. ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿಗಾಗಿ ಅಚ್ಚುಕಟ್ಟು ಪ್ರದೇಶದಲ್ಲಿರುವ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಬೇಕು.
ಸತ್ಯ ಶೋಧನಾ ಸಮಿತಿ ರಚನೆ: ಸರ್ಕಾರಕ್ಕೆ ಸಲಹೆ ನೀಡಲು ತಜ್ಞರು ಮತ್ತು ಆಸಕ್ತರನ್ನು ಒಳಗೊಂಡ ಸತ್ಯ ಶೋಧನಾ ಸಮಿತಿಯನ್ನು ರಚಿಸಲು ಚಿಂತನೆ ನಡೆಸಲಾಗಿದೆ. ಈ ಸಮಿತಿಯು ತುಮಕೂರು ಜಿಲ್ಲೆಗೆ ದೊರೆಯುವ ಎಲ್ಲಾ ನದಿ ನೀರಿನ ಯೋಜನೆಗಳ ಬಗ್ಗೆ ಸತ್ಯ ಶೋಧನಾ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದಿದ್ದಾರೆ.
ತುಮಕೂರಿಗೆ ಈಗಾಗಲೇ ನ್ಯಾಷನಲ್ ಹೂಡಿಕೆ ಮತ್ತು ಉತ್ಪಾದನಾ ವಲಯ ಪ್ರಸ್ಥಾಪನೆಯಾಗಿದ್ದು, ಇದರ ಜೊತೆಗೆ 2014-15 ರ ಕೇಂದ್ರ ಸರಕಾರದ ಮುಂಗಡ ಪತ್ರದಲ್ಲಿ ಮಹತ್ವದ ಯೋಜನೆಯಾದ ಸ್ಮಾರ್ಟ್ ಕೈಗಾರಿಕಾ ನಗರದ ಪರಿಕಲ್ಪನೆ ಯೋಜನೆಯನ್ನು ಮಂಜೂರು ಮಾಡಿದೆ. ಈ ಹಿನ್ನಲೆಯಲ್ಲಿ ಎಂಎಸ್ಎಂಇ ಪ್ರಾರಂಭಿಸಲು ಆಗ್ರಹಿಸಿದ್ದಾರೆ.
ಈ ಕ್ರಮದಿಂದ ಹಾಲಿ ಇರುವ ಸಣ್ಣ ಕೈಗಾರಿಕೋದ್ಯಮಿಗಳಿಗೆ ಮ್ಯಾನೇಜರಲಲ್ಪರಿಣಿತಿ ತರಬೇತಿ ಪಡೆದು ಆರ್ಥಿಕ ಸದೃಡತೆ ಕಂಡುಕೊಳ್ಳಲು ಕಾರಣವಾಗುತ್ತದೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಈ ಜಿಲ್ಲೆಯಲ್ಲಿ ಜಪಾನ್ ಕೈಗಾರಿಕಾ ಟೌನ್ ಶಿಪ್, ಚೆನೈ-ಬೆಂಗಳೂರು-ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್,ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್ನಿಂದ ಹಲವು ಸಣ್ಣ ಕೈಗಾರಿಕಾ ಕ್ಲಸ್ಟರ್ಗಳು ಪ್ರಾರಂಭವಾಗುತ್ತದೆ ಎಂದರು. ಗೋಷ್ಠಿಯಲ್ಲಿ ಕುಂದರನಹಳ್ಳಿ ರಮೇಶ್, ವಾಲೆಚಂದ್ರಯ್ಯ ಇದ್ದರು.