ನಾಲೆ ದುರಸ್ತಿಗೆ ಆಗ್ರಹ

Updated on: 

ತುಮಕೂರು: ಹೇಮಾವತಿ ನಾಲೆಯ ಶೀಘ್ರ ದುರಸ್ತಿಗೆ ಆಗ್ರಹಿಸಿ ನಗರದ ಕನ್ನಡ ಸೇನೆ ಕರ್ನಾಟಕ ವತಿಯಿಂದ ಕುಣಿಗಲ್ ರಸ್ತೆಯ ಹೇಮಾವತಿ ನಾಲಾ ವಲಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ ಅವರು, ಮುಂದಿನ ದಿನಗಳಲ್ಲಿ ಮೂರನೇ ಮಹಾಯುದ್ದ ನಡೆಯುವುದಾದರೆ ಅದು ನೀರಿಗಾಗಿ ಮಾತ್ರ. ತುಮಕೂರಿಗೆ ನೀರು ಬರುವ ಹೇಮಾವತಿ ನಾಲೆ ಒಡೆಯುವ ಹೀನ ಕೆಲಸ ಮುಂದಿನ ದಿನಗಳಲ್ಲಿ ಅನೇಕ ಜಗಳ, ಹೋರಾಟಗಳಿಗೆ ಕಾರಣವಾಗಬಹುದು. ಕುಡಿಯುವ ನೀರಿಗಾಗಿ ಕನ್ನಡಿಗರ ನಡುವೆ ಸಂಘರ್ಷಗಳು ಒಳ್ಳೆಯ ಬೆಳವಣಿಗೆಯಲ್ಲ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸೇನೆ ಕರ್ನಾಟಕದ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಹೇಮಾವತಿ ನಾಲಾ ದುರಸ್ತಿ ಕಾರ್ಯ ಅತಿ ತುರ್ತಾಗಿ ಆಗಬೇಕು. ಇಲ್ಲವಾದರೆ ತುಮಕೂರು ಬಂದ್‌ಗೆ ಕರೆ ನೀಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕರವೇ ಶಂಕರ್ ಮಾತನಾಡಿ, ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ಒಳ್ಳೆಯದಲ್ಲ. ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿ ಬರಗಾಲದ ಸ್ಥಿತಿ ಉಂಟಾಗಿದೆ. ಹಾಗಾಗಿ ಜಿಲ್ಲೆಯ ರೈತರು ಹೇಮಾವತಿಯ ನೀರನ್ನೇ ಅವಲಂಭಿಸಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದರು. ತುಮಕೂರು ನಗರ ಹಾಗೂ ಜಿಲ್ಲೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿರುವ ಹೇಮಾವತಿ ನಾಲೆಯ ಅಗಲೀಕರಣ ಯೋಜನೆಗೆ ಸರ್ಕಾರ ಶೀಘ್ರವೇ ಆದೇಶ ನೀಡಬೇಕು ಹಾಗೂ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವಂತೆ ಆರ್.ಎನ್. ವೆಂಕಟಾಚಲ ಸರ್ಕಾರವನ್ನು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಟಿ.ಆರ್. ಸದಾಶಿವಯ್ಯ, ವಿಠಲ್, ಸತೀಶ್, ಶ್ರೀಧರ್, ವೆಂಕಟೇಶ್, ರಾಮಮೂರ್ತಿಗೌಡ, ಪುಟ್ಟರಾಜು, ರಂಗಯ್ಯ, ಅನಿಲ್‌ಕುಮಾರ್, ಗುರುಪ್ರಸಾದ್ ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com