ತುಮಕೂರು: ಆರೋಗ್ಯ ಜೀವನ ನಡೆಸಲು ಉತ್ತಮ ಪರಿಸರ ಬೇಕು. ಅದನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಹೊಣೆ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಸಲಹೆ ನೀಡಿದರು. ಅವರು ಇಲ್ಲಿಗೆ ಸಮೀಪದ ಅಟವಿ ಸಿದ್ದಲಿಂಗೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರ ಸಂರಕ್ಷಣೆ ಮತ್ತು ನೀರು ನೈರ್ಮಲ್ಯ ಜಾಗೃತಿಗಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತಾಧಿಕಾರಿ ಷಣ್ಮುಖಪ್ಪ ಮಾತನಾಡಿ ಉತ್ತಮ ಪರಿಸರ ನಮ್ಮೆಲ್ಲರ ಜವಾಬ್ದಾರಿ ಎಂದು ವಿವರಿಸಿದರು. ತರೀಕೆರೆ ತಾಲೂಕು ಬಾವಿಕೆರೆ ನೇಸರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಕೆ. ಎಸ್. ಮಂಜುನಾಥ ಲಕ್ಕವಳ್ಳಿ, ಪರಿಸರ ರಕ್ಷಣೆ, ಗಿಡಮರಗಳನ್ನು ಬೆಳೆಸುವ ಜವಾಬ್ದಾರಿ, ನೀರು ನೈರ್ಮಲ್ಯ ರಕ್ಷಣೆ ಉಳಿಸಿ ಬೆಳೆಸುವ ಬಗ್ಗೆ ಕಥೆ ಮತ್ತು ಪರಿಸರ ಗೀತೆಗಳ ಮೂಲಕ ಮನದಟ್ಟು ಮಾಡಿದರು. ಕಾರ್ಯಕ್ರಮದ ಉದ್ಟಾಟನೆಯನ್ನು ಸಿ.ಟಿ. ಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳ ವಿ. ಸಿದ್ದಯ್ಯ ರವರು ನೆರವೇರಿಸಿದರು. ವಲಯದ ಮೇಲ್ವಿಚಾರಕ ಎಲ್. ಟಿ. ಪ್ರಕಾಶ್ ಮಾತನಾಡಿ, ನಮ್ಮ ಯೋಜನೆಯ ಉದ್ದೇಶ ಬಹಳ ವಿಸ್ತಾರವಾಗಿದ್ದು, ನಮ್ಮೆಲ್ಲಾ ಕಾರ್ಯಕ್ರಮಗಳಿಗೆ ನಿಮ್ಮೆಲ್ಲರ ಸಹಕಾರ ಮುಖ್ಯ. ಆರ್ಥಿಕ ಸ್ವಾಭಾವಿಕ ಸಾಮಾಜಿಕ ಭದ್ರತೆ ನಮ್ಮ ಉದ್ದೇಶ ಎಂದು ತಿಳಿಸಿದರು. ಕೇಶವಮೂರ್ತಿ ಆರ್ ನಿರೂಪಿಸಿದರು. ಮಂಜುನಾಥ ಸ್ವಾಗತಿಸಿದರು. ವೇದಿಕೆಯ ಮೇಲೆ ಗೋವಿಂದರಾಜು, ರಾಜಮ್ಮ, ಸಿ.ಟಿ. ಕೆರೆ ಶಾಲಾ ಸಿಬ್ಬಂದಿ ವರ್ಗದವರು, ಸೇವಾ ಪ್ರತಿನಿಧಿ ಆಶಾ ಹಾಗೂ ಪ್ರಗತಿ ಬಂಧು ಸಂಘದ ಸದಸ್ಯರು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು.
ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಕೊರಟಗೆರೆ: ತಾಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿರುವ ಕೊರಟಗೆರೆ ಬೆಸ್ಕಾಂ ಕಚೇರಿಗೆ ತಾಲೂಕು ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಮುತ್ತಿಗೆ ಹಾಕಿ ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿ ಪ್ರತಿಭಟಿನೆ ನಡೆಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಪವನ್ ಕುಮಾರ್ ತಾಲೂಕಿನಲ್ಲಿ ಮಳೆ ಇಲ್ಲದೆ ಬರದ ಛಾಯೆ ತಾಂಡವಾಡುತ್ತಿದೆ. ಕೊಳವೆ ಬಾವಿಗಳಲ್ಲಿರುವ ನೀರಿದ್ದರೂ ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದಾಗಿ ರೈತರು ತಮ್ಮ ಜಮೀನುಗಳಿಗೆ ನೀರು ಬಿಡುಲು ಆಗುತ್ತಿಲ್ಲ. ದರಿಂದಾಗಿ ಬೆಳೆಗಳು ಒಣಗುತ್ತಿವೆ ಎಂದರು. ಇಲಾಖೆ ಅನಿಯಮಿತ ಲೋಡ್ ಶಡ್ಡಿಂಗ್ ನಿಲ್ಲಿಸಿ ಕನಿಷ್ಠ 8 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಸಮರ್ಪಕವಾಗಿ ಪೂರೈಸಬೇಕು. ಅಲ್ಲಿಯವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದರು. ಪ್ರತಿಭಟನೆ ಗಾರರೊಂದಿಗೆ ಮಾತನಾಡಿದ ಕೊರಟಗೆರೆ ಬೆಸ್ಕಾಂ ಇಲಾಖೆಯ ಸಹಾಯಕ ಎಂಜಿನಿಯರ್ ಮಾರಣ್ಣ ನಾಯ್ಕ, ಕೆಲ ದಿನಗಳಿಂದ ತಾಲೂಕಿನಲ್ಲಿ ನೂತನ ಕೇಬಲ್ ವೈರ್ಗಳನ್ನು ಅಳವಡಿಸುತಿರುವ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ತ್ಯಾಸವಾಗುತ್ತಿದೆ. ಕಾಮಗಾರಿ ನಂತರ ಲೋಡ್ ಶೆಡ್ಡಿಂಗ್ ಇಲ್ಲದೆ ಹಗಲು ನಿರಂತರ 3 ಗಂಟೆ ಹಾಗೂ ರಾತ್ರಿ 4 ಗಂಟೆ ವಿದ್ಯುತ್ ಪೂರೈಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ತಿಮ್ಮಜ್ಜ, ಸಿ.ಎಸ್.ಹನುಮಂತರಾಜು, ರೈತ ಮೋರ್ಚಾ ಅಧ್ಯಕ್ಷ ಪ್ರಸ್ನನಕುಮಾರ್ ಮುಖಂಡರಾದ ಪೆದ್ದರಾಜು, ರವಿಶಂಕರ್, ನಟರಾಜು, ನಾಗರಾಜು, ಪ್ರಕಾಶ್ ರೆಡ್ಡಿ, ರವಿಕುಮಾರ್, ಪ್ರಸನ್ನ, ಚಂದ್ರಶೇಖರಯ್ಯ ಸೇರಿದಂತೆ ಇನ್ನಿತರ ಕಾರ್ಯಕರ್ತರು ಭಾಗವಹಿಸಿದ್ದರು. ಕೊರಟಗೆರೆ ಇನ್ಸ್ಪೆಕ್ಟರ್ ಚಂದ್ರಶೇಖರ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ವಿದ್ಯಾರ್ಥಿಗಳಿಗೆ ರಕ್ತದಾನದ ಅರಿವು ಕಾರ್ಯಕ್ರಮ
ಹುಳಿಯಾರು: ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವರೆಡ್ ಕ್ರಾಸ್, ರಾಷ್ಟ್ರೀಯ ಸೇವಾಯೋಜನೆ ಹಾಗೂ ಆರೋಗ್ಯ ಇಲಾಖೆ ಆಶ್ರಯದಲ್ಲಿ ಸೋಮವಾರ ನಡೆದ ವಿದ್ಯಾರ್ಥಿಗಳಿಗೆ ರಕ್ತದಾನದ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಹುಳಿಯಾರು ಸರ್ಕಾರಿ ಆಸ್ಪತ್ರೆಯ ಡಾ.ಚಂದನ ರಕ್ತದಾನದ ಪ್ರಯೋಜನದ ಬಗ್ಗೆ ತಿಳಿಸಿದರು. ರಕ್ತವನ್ನು ಕೃತಕವಾಗಿ ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ಒಬ್ಬ ಆರೋಗ್ಯವಂತ ವ್ಯಕ್ತಿ ರಕ್ತ ನೀಡುವುದರಿಂದ ರಕ್ತಕೊಟ್ಟವರ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಸ್ವಯಂಪ್ರೇರಿತರಾಗಿ ರಕ್ತ ನೀಡುವುದು ಒಳಿತು ಎಂದರು. ಪ್ರಾಂಶುಪಾಲ ಡಿ. ದೇವಿರಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ರಕ್ತದಾನದ ಅರಿವು ಮೂಡಿಸುವುದರಿಂದ ಮತ್ತೊಬ್ಬರಿಗೆ ಮನವರಿಕೆ ಮಾಡುತ್ತಾರೆ ಎಂದರು. ಉಪನ್ಯಾಸಕ ಶಂಕರಲಿಂಗಯ್ಯ, ಅಶೋಕ್, ಶ್ರೀನಿವಾಸ್, ಸಯ್ಯದ್ ಇಬ್ರಾಹಿಂ, ಹನುಮಂತಪ್ಪ ಇದ್ದರು.