ಕುವೆಂಪುರಿಂದ ರಾಮಾಯಣ ಮರುಹುಟ್ಟು

Updated on: 

ತುಮಕೂರು: ಆಧುನಿಕ ಕನ್ನಡ ಸಾಹಿತ್ಯದ ನವೋದಯ ಕಾಲದಲ್ಲಿ ಪ್ರಮುಖ ಕವಿಯಾಗಿ ಬಾಳಿದ ಕುವೆಂಪುರವರು ವಾಲ್ಮೀಕಿ ರಾಮಾಯಣವನ್ನು ಹೊಸದರ್ಶನವಾಗಿ ನೋಡಿದ ಪರಿಣಾಮ ಕನ್ನಡದಲ್ಲಿ ಶ್ರೀರಾಮಾಯಣದರ್ಶನಂ ಎಂಬ ಮೇರುಕೃತಿಯಾಗಿ ಮರುಹುಟ್ಟು ಪಡೆದಿದೆ ಎಂದು ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಮಾಜಿ ಅಧ್ಯಕ್ಷ ಡಾ.ಕೆ. ರಾಜಶೇಖರ್ ಹೇಳಿದರು.
ತುಮಕೂರಿನ ಜ್ಞಾನಬುತ್ತಿ ಸತ್ಸಂಗ ಕೇಂದ್ರ ನಗರದ ಶ್ರೀಕೃಷ್ಣನಗರದ ವಿದ್ಯಾವಾಹಿನಿ ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ 263 ನೇ ಸಾಪ್ತಾಹಿಕ ಉಪನ್ಯಾಸದಲ್ಲಿ ಕುವೆಂಪು ರಾಮಾಯಣ ದರ್ಶನಂನಲ್ಲಿ ಶಬರಿ ವಿಷಯದ ಬಗ್ಗೆ ಮಾತನಾಡಿ, ರಾಮಾಯಣದ ವಸ್ತು ಮಣ್ಣಿನಿಂದ ಮಾಡಿದ ಮಡಿಕೆಯಲ್ಲ. ಅಮೂಲ್ಯ ಲೋಹದಿಂದ ಮಾಡಿದ್ದಾಗಿದೆ ಎಂದರು.
ಅದನ್ನು ಕರಗಿಸಿ ತಮಗೆ ಬೇಕಾದ ರೂಪಕ್ಕೆ ಮಾಡುವಂತೆ ಕುವೆಂಪು ರಾಮಾಯಣವನ್ನು ತಮ್ಮದೇ ಆದ ಹೊಸ ದೃಷ್ಟಿಕೋನದಲ್ಲಿ ದರ್ಶನ ಮಾಡಿಸಿದ್ದಾರೆ. ಮೈಸೂರಿನಲ್ಲಿ ಕುವೆಂಪುರವರ ಶ್ರೀರಾಮಾಯಣ ದರ್ಶನಂ ಕೃತಿಯನ್ನು ಆನೆಯ ಮೇಲೆ ಅಂಬಾರಿಯಲ್ಲಿಟ್ಟು ಮೆರವಣಿಗೆ ಮಾಡಿದ ಗೌರವ ದೊರೆಯಿತು ಎಂದು ವಿಶ್ಲೇಷಿಸಿದರು.
ಶಬರಿ ಶ್ರೀರಾಮನ ಭಕ್ತೆಯಾಗಿದ್ದು ಮತಂಗ ಪರ್ವತದಲ್ಲಿ ವಾಸವಾಗಿದ್ದವಳು. ಶ್ರೀರಾಮ ಲಕ್ಷ್ಮಣರು ದರ್ಶನ ಕೊಡುತ್ತಾರೆಂದು ಮತಂಗ ಖುಷಿಯು ಹೇಳಿದ್ದನ್ನು ನಂಬಿದ ಶಬರಿ ಹತ್ತು ವರ್ಷಗಳಷ್ಟು ದೀರ್ಘಕಾಲ ಪ್ರತಿದಿನ ಅಡುಗೆ ಮಾಡಿ ರಾಮನಿಗಾಗಿ ಕಾಯುತ್ತಾಳೆ. ಶಬರಿಗೆ ಮುಪ್ಪಾಗಿ, ಕೂದಲು ನೆರೆದು, ಕಣ್ಣು ಮುಂಜಾದರೂ ರಾಮನಿಂದ ಸದ್ಗತಿ ಹೊಂದಲು ಕಾದು ಕೊನೆಗೂ ರಾಮ ಲಕ್ಷ್ಮಣರ ದರ್ಶನ ಪಡೆದು ಧನ್ಯಳಾಗುತ್ತಾಳೆ. ಶಬರಿ ರಾಮನಿಗಾಗಿ ತಪಸ್ಸಿನಂತೆ ಕಾಯುವ ಪರಿಯನ್ನು ಕುವೆಂಪುರವರು ತುಂಬಾ ಸೊಗಸಾಗಿ ವರ್ಣಿಸಿದ್ದಾರೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಡಾ.ಎಸ್.ಪಿ. ಪದ್ಮಪ್ರಸಾದ್ ಮಾತನಾಡಿ, ಶಬರಿ ಅತಿಥ್ಯದ ವರ್ಣನೆ ಕನ್ನಡದ ಬೇರೆ ರಾಮಾಯಣಗಳಲ್ಲಿ ಕಾಣಲು ಸಾಧ್ಯವಿಲ್ಲ. ಶಬರಿ ಒಬ್ಬ ಮುಗ್ಧಮನಸ್ಸಿನ ಬುಡಕಟ್ಟು ಜನರ ಪ್ರತಿನಿಧಿ. ರಾಮ ಬರುವನೆಂಬ ಭರವಸೆ ಕಳೆದುಕೊಳ್ಳದ ವ್ಯಕ್ತಿ. ಜೀವನದ ಆಶಾಭಾವನೆಯುಳ್ಳವಳು. ಕುವೆಂಪುರವರು ದೀರ್ಘವಾದ ಕಾಯುವಿಕೆಗೆ ತಕ್ಕ ಪ್ರತಿಫಲದ ಚಿತ್ರಣಕೊಟ್ಟಿದ್ದಾರೆ. ಸಣ್ಣ ಸಣ್ಣ ಅಂಶಗಳನ್ನು ಸೊಗಸಾಗಿ ಚಿತ್ರಿಸುವ ಶಕ್ತಿ ಕುವೆಂಪುರಂತಹ ಕವಿಗಳಿಗೆ ಮಾತ್ರ ಇರುತ್ತದೆ ಎಂದು ಹೇಳಿದರು. ಸಮಾರಂಭದಲ್ಲಿ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಸ್ಥಾಪಕ ಅಧ್ಯಕ್ಷ ಪಿ. ಶಾಂತಿಲಾಲ್ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com