ತಿಪಟೂರು: ಹೇಮಾವತಿ ನಾಲೆಯ 0-72ಕಿ.ಮೀ ವರೆಗೆ ಆಧುನೀಕರಣಕ್ಕಾಗಿ ಸರ್ಕಾರ ರು. 600 ಕೋಟಿ ಬಿಡುಗಡೆ ಮಾಡಿದ್ದು, ಈ ತಿಂಗಳ ಅಂತ್ಯದೊಳಗೆ ಸಂಪುಟ ಸಭೆಯ ಒಪ್ಪಿಗೆ ಪಡೆದು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಮತ್ತು ಇದೇ ವರ್ಷ ಡಿಸೆಂಬರ್ ತಿಂಗಳಿನಿಂದ ನಾಲೆ ವಿಸ್ತರಿಸುವ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.
ತಾಲೂಕಿನ ಲಕ್ಕಿಹಳ್ಳಿಯಲ್ಲಿರುವ ಬೈಫ್ ಗ್ರಾಮೀಣಾಭಿವೃದ್ಧಿ ಕೇಂದ್ರಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತುಂಬ ಹಿಂದೆ ಯಾವುದೇ ನೂತನ ತಂತ್ರಜ್ಞಾನದ ಸಹಾಯವಿಲ್ಲದೇ ನಿರ್ಮಾಣವಾದ ನಾಲೆ ಹಲವು ಬಾರಿ ಒಡೆದು ಜಿಲ್ಲೆಗೆ ನೀರು ಸಾಕಷ್ಟು ಪ್ರಾಮಾಣದಲ್ಲಿ ಹರಿಯುತ್ತಿರಲಿಲ್ಲ. ಆದ್ದರಿಂದ ನಾಲೆಯ ಆಧುನೀಕರಣದ ಜೊತೆಗೆ ನಾಲೆಯನ್ನು ಎರಡು ಪಟ್ಟು ವಿಸ್ತರಿಸಲಾಗುವುದು. ಇದರಿಂದಾಗಿ ಜಿಲ್ಲೆಗೆ ಮೀಸಲಾದ ನೀರನ್ನು ಸಂಪೂರ್ಣ ಬಳಸಿಕೊಳ್ಳಬಹುದು. ಈಗ ಸದ್ಯಕ್ಕೆ ಒಡೆದಿರುವ ನಾಲೆಯನ್ನು ಇನ್ನೊಂದು ವಾರದೊಳಗೆ ಸರಿಪಡಿಸಿ ನೀರು ಹರಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಮಳೆ ಇಲ್ಲದೆ ಸತತ ನಾಲ್ಕು ವರ್ಷಗಳಿಂದ ನೀರಿನ ಅಭಾವ ಹಾಗೂ ಬರಪರಿಸ್ಥಿತಿ ಎದುರಾಗಿದ್ದು ಈ ವರ್ಷವು ನೀರಿನ ಅಭಾವದಿಂದ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ನಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಈ ತಿಂಗಳ ಅಂತ್ಯದವರೆಗೂ ಮಳೆ ಬಾರದಿದ್ದಲ್ಲಿ ಬರಡೀಪಿತ ಪ್ರದೇಶಗಲ್ಲಿ ಗೋಶಾಲೆಗಳನ್ನು ಸ್ಥಾಪಿಸುವುದಾಗಿ ತಿಳಿಸಿದರು. ಮೇವನ್ನು ಹೊರ ರಾಜ್ಯದಿಂದ ತರಲು ವ್ಯವಸ್ಥೆ ಮಾಡಲಾಗುವುದು. ನೀರಿನ ಕೊರತೆ ಮತ್ತು ರೋಗಗಳಿಂದ ಹಾಳಾದ ತೆಂಗಿನ ಮರಳಿಗೆ ಸಂಬಂಧಿಸಿದ ರೈತರಿಗೆ ಪರಿಹಾರ ಒದಗಿಸಲು ಕೇಂದ್ರ ಸರ್ಕಾರ ನೀಡಿರುವ ರು. 80 ಕೋಟಿ ಸಾಕಾಗುವುದಿಲ್ಲ. ಕನಿಷ್ಠ 200 ಕೋಟಿ ಆದರೂ ಬೇಕು ಎಂದ ಅವರು, ಪರಿಹಾರ ನೀಡುವ ಮಾನದಂಡದ ಬಗ್ಗೆ ಇನ್ನೂ ನಿರ್ಧರಿಸಲಾಗಿಲ್ಲ. ಸೂಕ್ತ ಪರಿಹಾರ ಒದಗಿಸುಲ ಅಗತ್ಯ ಅನುದಾನ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದರು.
ಹೊನ್ನವಳ್ಳಿ ಏತ ನೀರಾವರಿಗೆ ಸಂಬಂಧಿಸಿ ವಿದ್ಯುತ್ ಮತ್ತು ನೀರು ಪ್ರಮಾಣ ಹೆಚ್ಚುವಿಕೆಗೆ ಪ್ರಯತ್ನಿಸಲಾಗುವುದು. ಅಮೃತ ಮಹಲ್ ಕಾವಲುಗಳಿಗೆ ನಾವು ಖುದ್ದಾಗಿ ಭೇಟಿ ನೀಡುತ್ತಿದ್ದು, ಇಲ್ಲಿನ ಸ್ಥಿತಿ ಶೋಚನೀಯವಾಗಿದೆ. ಕಾವಲುಗಳ ರಕ್ಷಣೆ ಮತ್ತು ಅಮೃತಮಹಲ್ ತಳಿಗಳ ರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದರು. ತಿಪಟೂರಿನ ಅಕ್ಷಯಕಲ್ಪ ಸಂಸ್ಥೆಯ ಸಾವಯವ ಹಾಲು ಮತ್ತು ಇತರೆ ಸಾವಯವ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದ ಬಗ್ಗೆ ಸಂಸ್ಥೆಯ ಅಧ್ಯಕ್ಷ ಡಾ. ಜಿ.ಎನ್.ಎಸ್. ರೆಡ್ಡಿ ಪ್ರಾತ್ಯಕ್ಷಿಕೆ ನೀಡಿದರು.
ಯಗಚಿ ನೀರಿಗೆ ಮನವಿ
ಗುರುತ್ವಾಕರ್ಷಣೆ ಬಲದಿಂದಲೇ ಯಗಚಿ ಹಿನ್ನೀರನ್ನು ತಿಪಟೂರು ಸೇರಿದಂತೆ ಮೂರು ತಾಲೂಕುಗಳಿಗೆ ಹರಿಸಿಕೊಳ್ಳಬಹುದು. ಇದು ಅತ್ಯಂತ ಕಡಿಮೆ ಖರ್ಚಿನಲ್ಲಿ ಕಡಿಮೆ ಸಮಯದಲ್ಲಿ ನೀರು ಪಡೆದು ಕೊಳ್ಳಬಹುದಾಗಿದೆ ಎಂದು ಯಗಚಿ ನೀರು ಹೋರಾಟ ಸಮಿತಿಯ ಬಸವರಾಜು, ನಂಜುಂಡಸ್ವಾಮಿ ಇತರರು ಸಚಿವರನ್ನು ಭೇಟಿ ಮಾಡಿ ದಾಖಲೆ ಸಮೇತ ವಿವರಿಸಿದರು. ಇದಕ್ಕೆ ಉತ್ತರಿಸಿದ ಸಚಿವರು ನೀರಾವರಿ ಸಮಿತಿ ಸಲ್ಲಿಸಿರುವ ವರದಿ ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ಉನ್ನತ ಅಧಿಕಾರಿಗಳನ್ನು ಕರೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು