ಕ. ಪ್ರ. ವಾರ್ತೆ, ಕೊರಟಗೆರೆ,ಆ.4
ಬೆಳಗಾವಿಯ ಯಳ್ಳೂರಿನಲ್ಲಿ ರಾಜಕೀಯ ಲಾಭಕ್ಕಾಗಿ ಎಂಇಎಸ್ನವರ ಪುಂಡಾಟಿಕೆಯಿಂದ ಗಲಭೆ ಸೃಷ್ಟಿಯಾಗಿದ್ದು, ಇದಕ್ಕೆ ಕರ್ನಾಟಕದ ರಾಜಕೀಯ ಪಕ್ಷಗಳು ಕಾರಣರಲ್ಲ. ಎಂಇಎಸ್ ಹಾಗೂ ಶಿವಸೇನೆ ಧೋರಣೆಯಲ್ಲಿ ಜೆಡಿಎಸ್ ಖಂಡಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ಮಾವತ್ತೂರು ಗ್ರಾಮದಲ್ಲಿ ನೂತನ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಸಂಘಟನೆಗಳು ಕಲ್ಲು ತೂರಾಟ, ಬೆಂಕಿ ಹಚ್ಚಿ ಅಶಾಂತಿ ವಾತಾವರಣ ಸೃಷ್ಟಿಸಬಾರದು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ನೀರಾವರಿಗಾಗಿ ಸತತ ಹೋರಾಟ ಮಾಡಿದ್ದು ಜೆಡಿಎಸ್ ಪಕ್ಷ. ಈಗಿನ ಸರ್ಕಾರ ಜನರಿಗೆ ನೀರು ನೀಡುವ ಇಚ್ಛಾಶಕ್ತಿ ಇಟ್ಟುಕೊಂಡಂತಿಲ್ಲ ಇದೇ ರೀತಿ ಆಳ್ವಿಕೆ ನಡೆದರೆ ಮುಂದಿನ 50 ವರ್ಷ ಕಳೆದರೂ ರಾಜ್ಯದಲ್ಲಿ ಸಮಗ್ರ ನೀರಾವರಿ ಮಾಡಲು ಸಾಧ್ಯವಿಲ್ಲ. ಭದ್ರ ಮೇಲ್ದಂಡೆ ಯೋಜನೆಗೆ ನನ್ನ ಅವದಿಯಲ್ಲಿ 5300 ಕೋಟಿ ಹಣ ಮೀಸಲಿಟ್ಟಿದ್ದೆ, ಆದರೆ ನಂತರ ಬಂದ ಸರ್ಕಾರಗಳು ಅದಕ್ಕೆ ಪ್ರಮುಖ್ಯತೆ ನಿಡಲಿಲ್ಲ ಈಗ ಅದರ ಯೋಜನಾ ವೆಚ್ಚ ಸುಮಾರು ಏಳೆಂಟು ಸಾವಿರ ಕೋಟಿ ಆಗಿದೆ ಎಂದರು.
ಪಟ್ಟನಾಯಕನಹಳ್ಳಿ ಮಠದ ಶ್ರೀನಂಜಾವಧೂತ ಸ್ವಾಮೀಜಿ ಮಾತನಾಡಿ, ರಾಜಕೀಯ ವ್ಯಕ್ತಿಗಳು ನೀರಾವರಿಗೆ ಹೆಚ್ಚು ಹೋತ್ತುಕೊಡದೆ ಹೋದಲ್ಲಿ ಜನರು ರಾಜಕಾರಣಿಗಳನ್ನು ಹೇಸಿಗೆ ಕಂಡಷ್ಟು ಅಸಹ್ಯ ಭಾವನೆಯಿಂದ ಕಾಣಲಿದ್ದಾರೆ. ಆದ್ದರಿಂದ ರಾಜಕಾರಣಿಗಳು ನೀರಾವರಿ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಬೇಕು ಎಂದ ಅವರು ಕೋಟ್ಯಂತರ ರು ಖರ್ಚು ಮಾಡಿ ದೇವಸ್ಥಾನ ನಿರ್ಮಾಣ ಮಾಡಿದರೆ ಸಾಲದು. ಆ ದೇವರ ವ್ಯಕ್ತಿತ್ವ ಅಧ್ಯಯನ ಮಾಡಿ ಆ ಗುಣಗಳನ್ನು ಭಕ್ತಾದಿಗಳು ಅಳವಡಿಸಿಕೊಳ್ಳಬೇಕು ಎಂದರು.
ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಭಕ್ತಾದಿಗಳು ತಾನು ಪೂಜಿಸುವ ದೇವರ ಅವತಾರ ಅಳವಡಿಸಿಕೊಂಡಾಗ ಮಾತ್ರ ಆ ದೇವರ ಆಶೀರ್ವಾದ ಲಭಿಸಲಿದೆ. ಇಲ್ಲದೆ ಹೋದಲ್ಲಿ ನಿಮ್ಮ ಮೊರೆ ಉಪಯೋಗ ಆಗುವುದಿಲ್ಲ ಎಂದ ಅವರು ಪಶ್ಚಿಮ ಘಟ್ಟದ ನೀರನ್ನು ಈ ಭಾಗಕ್ಕೆ ತರಲು ಅಲ್ಲಿ ಮೀನುಗಳು ಸಾಯುತ್ತವೆ ಎಂಬ ಕಾರಣ ನೀಡಿ ಅಡ್ಡಿ ಪಡಿಸುತ್ತಿದ್ದಾರೆ ಆದರೆ ಈ ಭಾಗಕ್ಕೆ ನೀರು ತರದೇ ಹೋದಲ್ಲಿ ಮನುಷ್ಯರೇ ಸಾಯಲಿದ್ದಾರೆ ಎಂಬುದನ್ನು ಅಲ್ಲಿಯ ಜನತೆ ತಿಳಿದು ಮಾನವೀಯತೆ ಪ್ರದರ್ಶಿಸಬೇಕಿದೆ ಎಂದರು.
ಶಾಸಕ ಸುಧಾಕರಲಾಲ್ ಹಾಗೂ ಮಾವತ್ತೂರು ಗ್ರಾ.ಪಂ.ಅಧ್ಯಕ್ಷ ಮಂಜುನಾಥ್ ಮಾತನಾಡಿ ಕೊರಟಗೆರೆ ತಾಲೂಕಿನ ಕೆರೆಗಳಿಗೆ ನೀರು ಹರಿಸಲು ಹೋರಾಟ ರೂಪಿಸುವಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮನವಿ ಮಾಡಿದರು. ಸಮಾರಂಭದಲ್ಲಿ ತಂಗನಹಳ್ಳಿ ಮಠದ ಬಸವ ಮಹಾಲಿಂಗ ಸ್ವಾಮೀಜಿ, ಜಿ.ಪಂ. ಮಾಜಿ ಅಧ್ಯಕ್ಷೆ ಪ್ರೇಮಾ ಮಾಹಾಲಿಂಗಪ್ಪ, ಸದಸ್ಯೆ ದಾಕ್ಷಾಯಿಣಿ ರಾಜಣ್ಣ, ತಾ.ಪ. ಅಧ್ಯಕ್ಷೆ ರಂಗಮ್ಮ, ಉಪಾಧ್ಯಕ್ಷೆ ಸಂಗೀತಾ, ತಾಲೂಕು ಜೆಡಿಎಸ್ ಅಧ್ಯಕ್ಷ ರಂಗಮುತ್ತಯ್ಯ, ಕಾರ್ಯಾಧ್ಯಕ್ಷ ನರಸಿಂಹರಾಜು, ಮುಖಂಡ ನಾಗರಾಜು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.