ಮಕ್ಕಳಿಗೆ ಹಣ್ಣುಗಳ ಬಗ್ಗೆ ತಿಳಿವಳಿಕೆ ನೀಡಲು ವಿನೂತನ ಮಾದರಿ
ತುರುವೇಕೆರೆ: ಅನಾನಸ್ ಬೆಳೆಯೋದು ಮರದಲ್ಲಾ, ಅದು ಗಿಡ ಅಲ್ವಾ. ಮತ್ತೆ ಅನಾನಸ್ ಮರದಲ್ಲಿ ಮಂಗಗಳು ಹೇಗೆ ಬಂದವು ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡುತ್ತಿದೆಯಲ್ಲವೇ. ಹೌದು ಇಂತಹ ಅಪರೂಪದ ಸನ್ನಿವೇಶವನ್ನು ಅನಾನಸ್ನಲ್ಲಿ ಸೃಷ್ಟಿಸಿ ಮಕ್ಕಳಲ್ಲಿ ಕುತೂಹಲ ಹುಟ್ಟಿಸಿದ್ದು ಇಲ್ಲಿಯ ಇಂಡಿಯನ್ ಪಬ್ಲಿಕ್ ಶಾಲೆಯಲ್ಲಿ.
ಮಕ್ಕಳಿಗೆ ಹಣ್ಣುಗಳ ಬಗ್ಗೆ ತಿಳವಳಿಕೆ ನೀಡುವುದು. ಅವುಗಳ ಸೇವನೆಯಿಂದ ಯಾವ ಯಾವ ಗುಣಾತ್ಮಕ ಅಂಶಗಳು ಲಭಿಸುತ್ತವೆ. ಅವುಗಳನ್ನು ಬೆಳೆಯುವ ಪ್ರದೇಶ ಯಾವುದು. ಹಣ್ಣುಗಳನ್ನು ಆಂಗ್ಲಭಾಷೆಯಲ್ಲಿ ಏನೆಂದು ಕರೆಯುತ್ತಾರೆ. ದೇಶ ವಿದೇಶಗಳ ನಾನಾ ಹಣ್ಣುಗಳ ಬಗ್ಗೆ ಮಾಹಿತಿ ನೀಡುವ ವಿಶ್ವ ಹಣ್ಣುಗಳ ಪರಿಚಯ ಎಂಬ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಈ ವೇಳೆ ಸುಮಾರು ಆರೇಳು ಅನಾನಸ್ಗಳನ್ನು ಬಳಸಿ ಮರವನ್ನು ನಿರ್ಮಿಸಲಾಗಿತ್ತು. ಮರವನ್ನು ಹತ್ತುವ ಮಂಗಗಳನ್ನು ನಿರ್ಮಿಸಲಾಗಿತ್ತು. ಪಪ್ಪಾಯಿಯಿಂದ ಮಂಗನ ದೇಹ, ಮೋಸಂಬಿಯಿಂದ ಮುಖ, ಬಾಳೆಹಣ್ಣಿನಿಂದ ಕೈ ಮತ್ತು ಕಾಲು, ಕಿತ್ತಲೆ ಸಿಪ್ಪೆಯಿಂದ ಕಿವಿ, ಕಪ್ಪು ದ್ರಾಕ್ಷಿಯಿಂದ ಮಂಗನ ಕಣ್ಣು, ಚರಿ ಹಣ್ಣಿನಿಂದ ಬಾಯಿ, ಬೆಂಡೇಕಾಯಿಯಿಂದ ಬಾಲವನ್ನು ಮಾಡಲಾಗಿತ್ತು. ಇದು ಪುಟಾಣಿ ಮಕ್ಕಳನ್ನು ಆಕರ್ಷಸಿ, ಮಂಗನಲ್ಲಿ ಇದ್ದ ಹಣ್ಣುಗಳ ಬಗ್ಗೆ ತಿಳಿದುಕೊಳ್ಳಲು ಸಹಾಯಕವಾಗಿತ್ತು.
ನೂರಾರು ಬಗೆಯ ಹಣ್ಣುಗಳ ಪರಿಚಯ ಮಾಡಿಸಲಾಯಿತು. ಅವುಗಳ ಮೂಲ ಹೆಸರು, ಅತಿ ಹೆಚ್ಚಾಗಿ ಬೆಳೆಯುವ ಸ್ಥಳಗಳ ಬಗ್ಗೆಯೂ ಮಾಹಿತಿ ನೀಡಲಾಯಿತು. ಚಿತ್ರಕಲಾ ಶಿಕ್ಷಕರಾದ ಆರ್.ಬಿ. ಶಂಕರ್ ಹಾಗೂ ಲತಾ ಸಂಜಯ್ ಕಾರ್ಯಕ್ರಮ ಆಯೋಜಿಸಿದ್ದರು. ವಿದ್ಯಾರ್ಥಿಗಳಾದ ಪ್ರಿಯದರ್ಶಿನಿ, ಅನುಷಾ, ಸಂಜನಾ, ಹಾಗೂ ಮನೋಜ್ ಸಹ ಹಣ್ಣುಗಳ ಸಂಗ್ರಹಣೆ ಮಾಡಲು ನೆರವಾಗಿದ್ದರು. ಮುಖ್ಯ ಶಿಕ್ಷಕಿ ಪುಷ್ಪಾ ಎಸ್ ಪಾಟೀಲ್ ಹಾಗೂ ಶಿಕ್ಷಕಿ ಶಶಿಕಲಾ ಇದ್ದರು.
Advertisement